ಶಿವಮೊಗ್ಗ : ಈ ಸಾಲಿನ ಹಣಕಾಸು ಆಯೊಗದಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ, ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಕಾರಿಪುರ ತಾಲೂಕು ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ವರ್ಷ ತೋಟಗಾರಿಕಾ ಬೆಳೆಗಳ ಕ್ಷೇತ್ರ ಹೆಚ್ಚಳವಾಗಬೇಕು ಎಂದರು.
ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ. ಒಂದೆರಡು ಎಕರೆ ಜಮೀನಿನಲ್ಲಿ ಮಾವು, ಬಾಳೆ, ಶುಂಠಿ, ತೆಂಗು ಮೊದಲಾದ ಮಿಶ್ರ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂ. ಲಾಭ ಪಡೆಯಲು ಸಾಧ್ಯವಿದೆ. ಹನಿ ನೀರಾವರಿಗೆ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಹನಿ ನೀರಾವರಿ ಸೌಲಭ್ಯಕ್ಕಾಗಿ ಬಾಕಿ ಇರುವ ಅರ್ಜಿಗಳ ಮಾಹಿತಿ ಒದಗಿಸಬೇಕು. ಈಗಾಗಲೇ ಹನಿ ನೀರಾವರಿ ಅಳವಡಿಸಿರುವ ರೈತರಿಗೆ ಸಬ್ಸಿಡಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕಿನಲ್ಲಿ ಹೆಚ್ಚುವರಿಯಾಗಿ ಎರಡು ಪಶು ವೈದ್ಯ ಆಸ್ಪತ್ರೆ ಆರಂಭಿಸಲು ಅನುಮೋದನೆ ನೀಡಲಾಗುವುದು. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಎಲ್ಲಾ ಕೆರೆ, ಕಟ್ಟೆಗಳು ತುಂಬಿವೆ. ಆದ್ದರಿಂದ ಕೆರೆ ಹೂಳು ತೆಗೆಯುವ ಕಾಮಗಾರಿಗಳನ್ನು ಸಧ್ಯಕ್ಕೆ ಕೈಗೆತ್ತಿಕೊಳ್ಳಬಾರದು. ಹೂಳೆತ್ತುವ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಆಗಿದ್ದರೂ, ನೀರು ಖಾಲಿಯಾದರೆ ಮಾತ್ರ ಕಾಮಗಾರಿ ಆರಂಭಿಸಿ. ಅನುದಾನ ದುರುಪಯೋಗಕ್ಕೆ ಯಾವುದೇ ಇಲಾಖೆಗಳು ಆಸ್ಪದ ನೀಡಬಾರದು ಎಂದು ಹೇಳಿದರು.
ಓದಿ : ಕೊರೊನಾ ಬಳಿಕ ಆರೋಗ್ಯ ಕ್ಷೇತ್ರದ ಮಹತ್ವ ಎಲ್ಲರಿಗೂ ಗೊತ್ತಾಗಿದೆ : ಡಾ.ಸಿ ಎನ್ ಅಶ್ವತ್ಥ್ ನಾರಾಯಣ
ಜಿಲ್ಲೆಯಲ್ಲಿ ಎಲ್ಲಾ ಹಳ್ಳಿಗಳಲ್ಲೂ ಸ್ಮಶಾನ ಜಾಗ ಗುರುತಿಸಬೇಕು. ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿ ಫಲಾನುಭವಿ ಮನೆಯವರು ನೀಡಬೇಕಾಗಿರುವ ಕಾಮಗಾರಿಯ ಶೇ.10 ರಷ್ಟು ಹಣವನ್ನು ಸರ್ಕಾರದಿಂದ ನೇರವಾಗಿ ಪಾವತಿಸುವ ಕುರಿತು ಈ ಬಾರಿಯ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜಲ ಜೀವನ್ ಮಿಷನ್ ಅಡಿ ಮನೆ ಮನೆಗೆ ನೀರು ಪೂರೈಸುವವ ಯೋಜನೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸಬೇಕು. ಶಿಕಾರಿಪುರ ಮಾದರಿ ತಾಲೂಕು ಮಾಡುವುದು ನನ್ನ ಗುರಿ. ಅಧಿಕಾರಿಗಳು ಇದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.