ಶಿವಮೊಗ್ಗ: ಕಾನೂನಿನ ಪ್ರಕಾರ ಬಾಲ್ಯ ವಿವಾಹ ನಿಷೇಧವಾಗಿದ್ದರೂ 27 ವರ್ಷದ ಯುವಕ 16 ವರ್ಷದ ಬಾಲಕಿಯನ್ನು ಮದುವೆಯಾದ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಿಳವಾಣಿ ಬಳಿಯ ಬೆದವಟ್ಟಿ ಗ್ರಾಮದಲ್ಲಿ ನಿನ್ನೆ ಬೆಳಗ್ಗೆ ಇಲ್ಲಿನ ವೀರಭದ್ರ ದೇವಸ್ಥಾನದಲ್ಲಿ ಬಾಲ್ಯವಿವಾಹ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಯುವಕನನ್ನು ಶಿಶು ಮತ್ತು ಮಹಿಳಾ ಕಲ್ಯಾಣಾಧಿಕಾರಿಗಳು ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ.
ಬೆದವಟ್ಟಿ ಗ್ರಾಮದ ಬಾಲಕಿಯನ್ನ ಶಿಕಾರಿಪುರ ತಾಲೂಕಿನ ಗುಡ್ಡದ ಹೊಸಹಳ್ಳಿ ಗ್ರಾಮದ ಗೋಪಾಲ್(27) ಎಂಬ ಯುವಕ ಮದುವೆಯಾಗಿದ್ದ, ಬಾಲ್ಯ ವಿವಾಹ ಆಗಿರುವುದರ ಕುರಿತು ಅಂಗನವಾಡಿ ಕಾರ್ಯಕರ್ತೆಯ ಮೂಲಕ ಮಾಹಿತಿ ಪಡೆದ ಶಿಶು ಮತ್ತು ಮಹಿಳಾ ಕಲ್ಯಾಣಾಧಿಕಾರಿಗಳು ಬಂದು ಪರಿಶೀಲನೆ ನಡೆಸಿ, ಪೊಲೀಸರ ಸಹಾಯದಿಂದ ವರನನ್ನು ಬಂಧಿಸಿದ್ದಾರೆ.
ಬಾಲಕಿಯನ್ನು ಶಿವಮೊಗ್ಗದ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಮದುವೆಯಾದ ಯುವಕ ಹಾಗೂ ಆತನ ಪೋಷಕರ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.