ಶಿವಮೊಗ್ಗ: ಬಾಲ್ಯ ವಿವಾಹ ನಡೆಯದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಎಚ್ಚರಿಕೆ ವಹಿಸುತ್ತಿದೆ. ಬಾಲ್ಯ ವಿವಾಹ ನಿಷೇಧ ಅಭಿಯಾನದಡಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಕೂಡ ಅಧಿಕಾರಿಗಳ ಕಣ್ಣುತಪ್ಪಿಸಿ ಅಲ್ಲಲ್ಲಿ ಬಾಲ್ಯ ವಿವಾಹ ಮಾಡಲಾಗುತ್ತದೆ. ಅಂತಹದೇ ಒಂದು ಘಟನೆ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದಲ್ಲಿ ಬೆಳಕಿಗೆ ಬಂದಿದೆ.
ಫೆಬ್ರವರಿ 27 ರಂದು ಯಲ್ಲದಕೋಣೆಯ ನಿವಾಸಿ ರಮೇಶ್(33) ಎಂಬುವರ ಜೊತೆ ಬಳ್ಳಾರಿ ಜಿಲ್ಲೆಯ ಕೊಡ್ಲಿಗಿ ತಾಲೂಕಿನ ಕರ್ನಾರ್ ಹಟ್ಟಿಯ 16 ವರ್ಷದ ಬಾಲಕಿಯನ್ನ ಮದುವೆ ಮಾಡಲಾಗಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಸಹ ಮದುವೆಯನ್ನು ನೆರವೇರಿಸಲಾಗಿದೆ. ಈ ಕುರಿತು ಮಕ್ಕಳ ಸಹಾಯವಾಣಿಗೆ ದೂರು ಬಂದ ಹಿನ್ನೆಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಲ್ಲದಕೋಣೆ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ.
ಘಟನೆಗೆ ಸಂಬಂಧಿಸಿದಂತೆ ಬಾಲ್ಯ ವಿವಾಹ ಕಾಯ್ದೆಯಡಿ ರಮೇಶ್ ತಾಯಿ ಹಾಗೂ ಬಾಲಕಿಯ ತಂದೆ-ತಾಯಿ ಮತ್ತು ಮದುವೆ ಮಾಡಿಸಿದ ಪುರೋಹಿತರ ವಿರುದ್ಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನನ್ವಯ ರಮೇಶ್ ಹಾಗೂ ಕುಟುಂಬದವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬಾಲ್ಯ ವಿವಾಹ ವಿರೋಧಿಸಿದ್ದಕ್ಕೆ ಹುಡುಗಿಯ ಅಣ್ಣನಿಗೇ ಚಾಕು ಇರಿತ : ಆರೋಪಿ ನಾಪತ್ತೆ