ಶಿವಮೊಗ್ಗ: ಒಂದು ಕಡೆ ಕೋವಿಡ್ ಹಾಗೂ ಇನ್ನೊಂದು ಕಡೆ ಪ್ರವಾಹ ಎರಡರಿಂದಲೂ ಜನ ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನು ಸಮರ್ಥವಾಗಿ ಎದುರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಗೆ ನೂರಾರು ಗ್ರಾಮಗಳು ಜಲಾವೃತವಾಗಿವೆ. ಅದರಂತೆ ಬೆಂಗಳೂರಿನಲ್ಲಿ ಸಹ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಇದರಿಂದ ಬಹಳ ಅನಾಹುತ ಆಗಿದೆ. ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸುಮಾರು 600 ಮನೆಗಳ ಪರಿಶೀಲನೆ ನಡೆಸಿದ್ದೇನೆ. ಹಾನಿಗೊಳಗಾದ ಪ್ರತಿಯೊಂದು ಮನೆಗೆ 25 ಸಾವಿರ ಪರಿಹಾರ ನೀಡುವಂತೆ ಸೂಚಿಸಿದ್ದೇನೆ. ಈಗಾಗಲೇ ನಿನ್ನೆ ಸಂಜೆಯಿಂದಲೇ ಪರಿಹಾರ ವಿತರಣೆ ಕಾರ್ಯ ಆರಂಭವಾಗಿದೆ. ಎಲ್ಲಾ ಸಂಕಷ್ಟವನ್ನೂ ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎಂದರು.
ಉಪ ಚುನಾವಣೆ ನಡೆಯುತ್ತಿರುವ ಆರ್ಆರ್ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಆರ್ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲಲಿದೆ. ಅದೇ ರೀತಿ ಶಿರಾದಲ್ಲಿ ಸಹ ನೂರಕ್ಕೆ ನೂರು ಬಿಜೆಪಿ ಗೆಲ್ಲುತ್ತದೆ. ಈ ಹಿಂದೆ ನಾನು ವಿರೋಧ ಪಕ್ಷದ ನಾಯಕರಿಗೆ ವಿಧಾನಸಭೆಯಲ್ಲಿ ಒಂದು ಮಾತು ಹೇಳಿದ್ದೆ, ಬರುವಂತಹ ಎಲ್ಲಾ ಚುನಾವಣೆ ಗೆಲ್ಲುವುದೇ ನನ್ನ ಗುರಿ ಎಂದು. ಮುಂದಿನ ದಿನಗಳಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ನಾನು ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡುತ್ತೇನೆ ಎಂದರು.
ಸಂಕಷ್ಟಗಳು ಬಂದಾಗ ಅದಕ್ಕೆ ಹೆದರಿ ಕೈ ಕಟ್ಟಿಕೊಂಡು ಕುಳಿತುಕೊಳ್ಳಲು ಆಗಲ್ಲ, ಅದನ್ನು ಎದುರಿಸಿ ಜನರ ಸಮಸ್ಯೆಗೆ ಸ್ಪಂದಿಸಿ, ಅವರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಮಾಡುವುದು ಒಬ್ಬ ಮುಖ್ಯಮಂತ್ರಿಯ ಕರ್ತವ್ಯವಾಗಿದೆ. ಆ ದಿಕ್ಕಿನಲ್ಲಿ ಎಲ್ಲರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಬರುವಂತಹ ದಿನದಲ್ಲಿ ದೇವರು ಹೆಚ್ಚು ಪರೀಕ್ಷೆ ಮಾಡದೇ ಈ ಕೊರೊನಾ ಕಡಿಮೆಯಾಗಿ, ಅತಿವೃಷ್ಟಿ ಕಡಿಮೆಯಾಗಲಿ,ರೈತ ನೆಮ್ಮದಿಯಿಂದ ಬದುಕುವ ಒಳ್ಳೆಯ ಕಾಲ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಶಾಲಾ ಕಾಲೇಜ್ ಓಪನ್ : ಮುಂದಿನ ತಿಂಗಳ 17 ರಿಂದ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜ್ ಓಪನ್ ಮಾಡುವ ಬಗ್ಗೆ ಯೋಚನೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಕಡ್ಡಾಯವಲ್ಲ. ಮಕ್ಕಳ ತಂದೆ-ತಾಯಿ ಅವರ ಒಪ್ಪಿಗೆ ಪಡೆದು ಯಾರು ಕಾಲೇಜಿಗೆ ಬರುತ್ತಾರೆ ಅವರೆಲ್ಲರಿಗೆ ಕಾಲೇಜ್ ನಡೆಸುತ್ತೇವೆ.
ಸಿಗಂದೂರು ದೇವಾಲಯಕ್ಕೆ ಸಲಹಾ ಸಮಿತಿ: ಸಿಗಂದೂರು ದೇವಾಲಯಕ್ಕೆ ಜಿಲ್ಲಾಧಿಕಾರಿ ಕಳುಹಿಸಿ ಅಲ್ಲಿಯ ವಾಸ್ತವ ಸ್ಥಿತಿ ಅವಲೋಕಿಸುವಂತೆ ಹೇಳಿದ್ದೇನೆ. ಜಿಲ್ಲಾಡಳಿತ ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿ ರಚನೆ ಮಾಡಿದೆ. ದೇವಾಲಯದಲ್ಲಿ ಹಣ ದುರುಪಯೋಗ ಆಗದ ರೀತಿ ಒಳ್ಳೆಯ ರೀತಿ ಅಲ್ಲಿ ಕಾರ್ಯ ನಡೆಯಬೇಕು ಎಂಬ ದೃಷ್ಟಿಯಿಂದ ಜಿಲ್ಲಾಧಿಕಾರಿಯವರಿಗೆ ಜವಾಬ್ದಾರಿ ಕೊಟ್ಟಿದ್ದೇನೆ. ಇನ್ನು ಮುಂದೆ ಅಲ್ಲಿ ದೊಡ್ಡ ಪ್ರಮಾಣದ ಆದಾಯ ಬರುತ್ತದೆ. ಅದು ದುರುಪಯೋಗ ಆಗದಂತೆ ಎಲ್ಲರ ಸಹಕಾರದಿಂದ ಸರಿ ದಾರಿಗೆ ತರುವ ಚಿಂತನೆ ನಡೆಸಲಾಗಿದೆ. ದೇವಸ್ಥಾನಕ್ಕೆ ಭಕ್ತರು ನೀಡುವ ಹಣ, ಆಭರಣ ದುರುಪಯೋಗ ಆಗಬಾರದು ಎಂಬ ದೃಷ್ಟಿಯಿಂದ ಸಮಿತಿ ರಚಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೈಮಗಿದು ಪ್ರಾರ್ಥಿಸುತ್ತೇನೆ ಎಂದರು.