ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾಗಿದ್ದ ಡಾ. ಆರ್.ಎಂ. ಮಂಜುನಾಥ್ ಗೌಡ ಹಾಗೂ ಎಂ.ಡಿ ರಾಜಣ್ಣ ರೆಡ್ಡಿ ಅವರನ್ನು ರಾಜ್ಯ ಸರ್ಕಾರ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷರಾಗಿ ಚನ್ನವೀರಪ್ಪ ಅಧಿಕಾರ ಸ್ವೀಕರಿಸಿದ್ದಾರೆ.
ಎಂಡಿ ಆಗಿ ಸಹಕಾರ ನಿಬಂಧಕರಾದ ನಾಗೇಶ್ ಡೋಂಗರೆ ಅವರು ಜು.15 ಅಧಿಕಾರ ಸ್ವೀಕರಿಸಿದ್ದರು. ಅಧ್ಯಕ್ಷ ಮಂಜುನಾಥ ಗೌಡರನ್ನು ಅಧಿಕಾರ ದುರ್ಬಳಕೆ ಹಾಗೂ ವ್ಯಾಪ್ತಿ ಮೀರಿ ಬೇರೆ ಕಾರ್ಖಾನೆಗಳಿಗೆ ಸಾಲ ನೀಡಿದ ಆರೋಪದಡಿ ಸಹಕಾರ ಇಲಾಖೆಯ ನಿಯಮದಂತೆ 29(ಸಿ) ಸಹಕಾರ ಸಂಘ ಸದಸ್ಯತ್ವದಿಂದಲೇ ಅನರ್ಹರನ್ನಾಗಿ ಮಾಡಿದೆ. ಅಧ್ಯಕ್ಷರು ಅನರ್ಹರಾದರೆ ಅಥವಾ ಅಧ್ಯಕ್ಷರು ರಾಜೀನಾಮೆ ನೀಡಿದರೆ, ಉಪಾಧ್ಯಕ್ಷರು ಅಧ್ಯಕ್ಷರಾಗಿ ಮುಂದುವರೆಯಬಹುದು. ಇದರಿಂದ ಉಪಾಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರು ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಶಿವಮೊಗ್ಗದ ಜಿಲ್ಲಾ ಕೇಂದ್ರ ಬ್ಯಾಂಕ್ನ ಅಧ್ಯಕ್ಷರ ಕೊಠಡಿಯಲ್ಲಿ ಚನ್ನವೀರಪ್ಪ ಇಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಬ್ಯಾಂಕ್ನ ನೌಕರರು ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು.
ನಂತರ ಮಾತನಾಡಿದ ಅವರು, ಸರ್ಕಾರದ ಆದೇಶದ ಪ್ರಕಾರ ಜು.15 ರಂದು ಎಂಡಿ ಆಗಿ ನಾಗೇಶ್ ಡೋಂಗರೆ ಅಧಿಕಾರ ಸ್ವೀಕರಿಸಿದ್ದಾರೆ. ಅದರಂತೆ ನಾನು ಸಹ ಇಂದು ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಈಗ ಚುನಾವಣಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ಅಧ್ಯಕ್ಷರ ಚುನಾವಣೆಯ ದಿನಾಂಕ ಘೋಷಣೆ ಮಾಡಲಿದ್ದಾರೆ. ನಂತರ ಚುನಾವಣೆ ನಡೆಯಲಿದೆ. ನಮ್ಮಲ್ಲಿಯೇ ಇರುವ ನಿರ್ದೇಶಕರಲ್ಲಿ ಒಬ್ಬರು ಅಧ್ಯಕ್ಷರಾಗಲಿದ್ದೇವೆ. ಕುಳಿತು ಮಾತನಾಡಿಕೊಂಡು ಅಧ್ಯಕ್ಷರ ನೇಮಕ ಮಾಡಲಿದ್ದೇವೆ ಎಂದು ತಿಳಿಸಿದರು.