ಶಿವಮೊಗ್ಗ: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಉಂಬ್ಳೆಬೈಲು ಹಾಗೂ ಕಡೇಕಲ್ಲು ಗ್ರಾಮಗಳ ಸುತ್ತ-ಮುತ್ತ ಕಾಡಾನೆ ಹಾವಳಿ ಅತಿಯಾದ ಹಿನ್ನೆಲೆ ಇಂದು ಸಿಸಿಎಫ್ ಅವರ ಕಚೇರಿಯಲ್ಲಿ ಗ್ರಾಮಸ್ಥರ ಸಭೆ ನಡೆಸಲಾಯಿತು.
ಉಂಬ್ಳೆಬೈಲು ಸುತ್ತಮುತ್ತ ಕಾಡಾನೆ ಕಾಟ ತಪ್ಪಿಸಬೇಕು ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಉಂಬ್ಳೆಬೈಲು ಗ್ರಾಮದ ಸುತ್ತಮುತ್ತಲಿನವರು ಇಂದು ಪ್ರಜಾಸ್ಪಂದನ ಹೋರಾಟ ಸಮಿತಿ ನೇತೃತ್ವದಲ್ಲಿ ಸಿಸಿಎಫ್ ರವಿಶಂಕರ ಅವರನ್ನು ಭೇಟಿ ಮಾಡಿದರು.
ಉಂಬ್ಳೆಬೈಲು ಗ್ರಾಮ ಭದ್ರಾ ಅಭಯಾರಣ್ಯದ ಪಕ್ಕದಲ್ಲಿಯೇ ಇರುವುದರಿಂದ ಕಾಡಾನೆ ಹಾಗೂ ಕಾಡು ಪ್ರಾಣಿಗಳ ದಾಳಿಯಿಂದ ತೋಟದ ಬೆಳೆಗಳಿಗೆ ಹಾನಿಯಾಗುತ್ತಿದೆ. ಈ ಹಿಂದೆ ಆದ ಬೆಳೆ ಹಾನಿಗೆ ಇನ್ನೂ ಪರಿಹಾರ ಬಂದಿಲ್ಲ. ಬಗರ್ ಹುಕುಂ ಭೂಮಿಗೆ ಪರಿಹಾರ ಒದಗಿಸಲಾಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಕಾಡು ಪ್ರಾಣಿಗಳು ಬೆಳೆ ಹಾನಿ ಮಾಡುತ್ತಿವೆ. ಒಂದು ವರ್ಷದಿಂದ ಬೆಳೆ ಹಾನಿ ಪರಿಹಾರಕ್ಕೆ ಜನರು ಕಚೇರಿ ಅಲೆದು ಸುಸ್ತಾಗಿದ್ದಾರೆ. ಸರ್ಕಾರ ಪರಿಹಾರ ನೀಡಲು ಸತಾಯಿಸುವುದನ್ನು ಬಿಡಬೇಕು. ತೀರ್ಥಹಳ್ಳಿ ತಾಲೂಕು ಬಿಸು ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಅಡಿಕೆ ಸಸಿಗಳನ್ನು ಕಿತ್ತು ಹಾಕಿದ್ದರು. ಅಡಿಕೆ ಸಸಿ ಕಿತ್ತು ಹಾಕಿದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಒಂದು ವೇಳೆ ಮಾರ್ಚ್ 31ರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿಯನ್ನೂ ಓದಿ: ಸಮಗ್ರ ಕೃಷಿಯಲ್ಲಿ ಮಿಂಚಿದ ಧಾರವಾಡದ ಮಹಿಳೆ... ರೈತರಿಗೆ ಮಾದರಿಯಾದ ನಾರಿ ಪಥ
ಈ ವೇಳೆ ಮಾತನಾಡಿದ ಸಿಸಿಎಫ್ ರವಿಶಂಕರ, ಸರ್ಕಾರದಿಂದ ಬೆಳೆ ಪರಿಹಾರದ ಹಣ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ರೈತರ ಖಾತೆಗೆ ಹಣವನ್ನು ನೇರವಾಗಿ ಹಾಕಲಾಗುತ್ತಿದೆ. ಕಾಡಾನೆ ಹಾವಳಿ ತಡೆಗೆ 33 ಕಿಮೀ ಕಂದಕಗಳನ್ನು ಮಾಡಲು 3 ಕೋಟಿ ರೂ. ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅದಷ್ಟು ಬೇಗ ಕಂದಕಗಳನ್ನು ತೆಗೆಯಲಾಗುವುದು ಎಂದರು.