ಶಿವಮೊಗ್ಗ: ಚಲಿಸುತ್ತಿದ್ದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ಕಾಸ್ಪಡಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಬೆಂಗಳೂರಿನ ಮಾಗಡಿ ರಸ್ತೆ, ಸುಂಕದಕಟ್ಟೆಯ ಕುಮಾರಿ ಪಾವನ ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಿಂದ ಇಟಿಯೋಸ್ ಕಾರಿನಲ್ಲಿ ಸಾಗರದ ಸಿಗಂದೂರು ದೇವಾಲಯಕ್ಕೆ ಮಧುಕುಮಾರ್, ಪಾವನ ಹಾಗೂ ಗಂಗಮ್ಮ ಎಂಬುವರು ಬರುವಾಗ ಅಪಘಾತ ಸಂಭವಿಸಿದೆ. ಬೆಳಗಿನ ಜಾವದ ನಿದ್ದೆ ಕಣ್ಣಿನಲ್ಲಿ ಇದ್ದ ಕಾರಣ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಮರಕ್ಕೆ ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿದೆ. ಈ ವೇಳೆ ಪಾವನ ಮೃತಪಟ್ಟಿದ್ದಾರೆ. ಇನ್ನು ಮಧು ಕುಮಾರ್ ಹಾಗೂ ಗಂಗಮ್ಮಗೆ ಗಾಯಗಳಾಗಿವೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.