ಕೋವಿಡ್ ಲಸಿಕೆ ಕುರಿತು ಜನಸಾಮಾನ್ಯರಲ್ಲಿ ಸಾಕಷ್ಟು ಗೊಂದಲಗಳಿವೆ. ಅದರಲ್ಲೂ ಕೋವಿಡ್ ಸೋಂಕಿತ ಗರ್ಭಿಣಿಯರು ಲಸಿಕೆ ಪಡೆಯಬಹುದೇ? ಗರ್ಭಿಣಿಯರಿಗೆ ಸೋಂಕು ಬಾಧಿಸಿದರೆ ಏನು ಮಾಡಬೇಕು? ಕೋವಿಡ್ ಸೋಂಕಿತ ತಾಯಿ ಹುಟ್ಟಿದ ಮಗುವಿನ ಆರೈಕೆ ಮಾಡಬೇಕೆ, ಬೇಡ್ವೇ? ತಾಯಿ ಹಾಲು ಉಣಿಸಬಹುದಾ ಅಥವಾ ಬೇಡ್ವಾ? ಹೀಗೆ ಸಾಕಷ್ಟು ಪ್ರಶ್ನೆಗಳ ಬಗ್ಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ದ್ರಾಕ್ಷಾಯಣಿಯವರು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ .
ಗರ್ಭಿಣಿಯರಿಗೆ ಕೋವಿಡ್ ಸೋಂಕು ಬಾಧಿಸಿದರೆ ಏನು ಮಾಡ್ಬೇಕು? ಗರ್ಭಿಣಿಯರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡರೆ ಭಯ ಪಡುವ ಅಗತ್ಯವಿಲ್ಲ. ಧೈರ್ಯದಿಂದ ಸೋಂಕನ್ನು ಎದುರಿಸಬೇಕು. ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕು. ಕೋವಿಡ್ಗೆ ಹೆದರಿ ಗರ್ಭಪಾತ ಮಾಡಿಸುವಂತ ಪ್ರಯತ್ನ ಮಾಡಬಾರದು.
ಹೆರಿಗೆ ನಂತರ ಕೋವಿಡ್ ಸೋಂಕು ಕಾಣಿಸಿಕೊಂಡರೆ ಏನ್ ಮಾಡ್ಬೇಕು, ಹುಟ್ಟಿದ ಮಗುವಿಗೆ ಆರೈಕೆ ಮಾಡಬಹುದಾ? ಹೆರಿಗೆಯಾದ ನಂತರ ಕೋವಿಡ್ ಕಾಣಿಸಿಕೊಂಡರೆ ಭಯ ಪಡುವ ಅಗತ್ಯವಿಲ್ಲ. ಮಗುವಿನ ಆರೈಕೆ ಮಾಡುವುದನ್ನು ನಿಲ್ಲಿಸಬೇಡಿ. ಸೋಂಕಿತ ತಾಯಿ ಮಗುವಿನ ಆರೈಕೆ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ತುಂಬಾ ಅವಶ್ಯಕ ಹಾಗಾಗಿ ಮಗುವಿನ ಆರೈಕೆ ಮಾಡಬಹುದಾಗಿದೆ.
ಗರ್ಭಿಣಿಯರು, ಬಾಣಂತಿಯರು ಕೋವಿಡ್ ಲಸಿಕೆ ಪಡೆಯಬಹುದೆ? ಗರ್ಭಿಣಿಯರು, ಬಾಣಂತಿಯರು ಕೋವಿಡ್ ಲಸಿಕೆ ಪಡೆಯಬಹುದು. ಬೇರೆ ದೇಶಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ.
ಋತುಸ್ರಾವದ ಸಮಯದಲ್ಲಿ ಲಸಿಕೆ ತಗೆದುಕೊಳ್ಳಬಹುದೇ? ಋತುಸ್ರಾವದ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳಬಹುದು. ಅದರಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಹಾಗಾಗಿ ಎಲ್ಲರೂ ತಪ್ಪದೇ ಲಸಿಕೆ ಪಡೆದುಕೊಂಡು ಕೊರೊನಾ ವಿರುದ್ಧ ಹೋರಾಟ ಮಾಡೋಣ.