ಶಿವಮೊಗ್ಗ: ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ಇನ್ನು ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಡಾ ಅಧ್ಯಕ್ಷ ಹಾಗೂ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಆನ್ ಅಂಡ್ ಆಫ್ ನೀರು ಬಿಡುವ ಕುರಿತು ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ಮಳೆ ಕೊರತೆ ಹಿನ್ನೆಲೆ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿದೆ. ಭದ್ರಾ ಅಣೆಕಟ್ಟೆಯು ನಾಲ್ಕೈದು ಜಿಲ್ಲೆಗಳಿಗೆ ಜೀವನಾಡಿಯಾಗಿದೆ. 186 ಅಡಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಅಣೆಕಟ್ಟಿನಲ್ಲಿ 162 ಅಡಿ ನೀರು ಸಂಗ್ರಹವಿದೆ. ಕಳೆದ ತಿಂಗಳು ಐಸಿಸಿ ಸಭೆಯಲ್ಲಿ 100 ದಿನಗಳ ಕಾಲ ನೀರು ಹರಿಸುವಿಕೆಯ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ, ಮಳೆ ಕಡಿಮೆಯಾದ ಕಾರಣ ಸತತ 100 ದಿನ ನೀರು ಹರಿಸುವಿಕೆ ತಡೆ ಹಿಡಿಯಲಾಗಿದೆ. ಇದರಿಂದಾಗಿ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ನಾನು ಕಾಡಾ ಅಧ್ಯಕ್ಷನಾಗುವ ಮೊದಲೇ 100 ದಿನ ನೀರು ಬಿಡಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಇಂದು ನೀರು ಹರಿಸುವಿಕೆಯ ಕುರಿತು ತೀರ್ಮಾನ ಕೈಗೊಳ್ಳು ನಾಲ್ಕೈದು ದಿನ ಸಮಯವನ್ನು ತೆಗೆದುಕೊಂಡಿದ್ದೇನೆ. ಎಡ ನಾಲೆಯ ನೀರು ನಿಲುಗಡೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಲದಂಡೆಯೇ ಭಾಗಕ್ಕೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಆ ಭಾಗದ ರೈತರಿಗೆ ಭತ್ತ ಬೆಳೆಯಬಾರದು ಎಂದು ಹೇಳಿದರೂ, ರೈತರು ಭತ್ತ ನಾಟಿ ಮಾಡಿದ್ದಾರೆ. ಕಾನೂನು ಪ್ರಕಾರ ಬಲದಂಡೆ ಕಾಲುವೆ ಭಾಗದ ರೈತರಿಗೆ ಭತ್ತ ಬೆಳೆಯಬಾರದು ಎಂದು ಹೇಳಲಾಗಿತ್ತು. ಆದರೆ ಅವರು ಭತ್ತ ಬೆಳೆದಿದ್ದಾರೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ನೀಡಲಾಗುತ್ತದೆ. ಮಳೆ ಬಾರದೇ ಹೋದ್ರೆ, ಕುಡಿಯುವ ನೀರಿಗೆ ಹಾಗೂ ಬೇಸಿಗೆಯಲ್ಲಿ ಬೆಳೆಗೆ ತುಂಬ ಸಮಸ್ಯೆ ಉಂಟಾಗುತ್ತದೆ. ಸೆಪ್ಟೆಂಬರ್ 10 ಅಥವಾ 11ರಲ್ಲಿ ನೀರು ನಿಲುಗಡೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ನಾನು ನೀರಾವರಿ ಸಚಿವರಿಗೆ ತಿಳಿಸುತ್ತೇನೆ ಎಂದರು.
ನನ್ನನ್ನು ನಾಲ್ಕು ದಿನದ ಹಿಂದೆ ಕಾಡಾದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಹಾಗಾಗಿ ನಾನು ಇಷ್ಟು ಬೇಗ ಸಭೆ ಕರೆದಿದ್ದೇನೆ. ಹಿಂದಿನ ಸಭೆಯಲ್ಲಿ ಜುಲೈನಲ್ಲಿ ಬಂದ ಮಳೆಯಂತೆಯೇ ಮುಂದೆ ಬರಬಹುದು ಎಂದು ಅವರು ಭಾವಿಸಿ ನೂರು ದಿನ ನೀರು ಬಿಡಲು ತೀರ್ಮಾನ ಮಾಡಿದ್ದರು. ಆಗಸ್ಟ್ ತಿಂಗಳಲ್ಲಿ ದಾಖಲೆಯ ರೀತಿಯಲ್ಲಿ ಮಳೆ ಕಡಿಮೆ ಆಗಿದೆ ಹಾಗೂ ಅಣೆಕಟ್ಟೆಗೆ ಒಳ ಹರಿವು ಕಡಿಮೆಯಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ದಾವಣಗೆರೆ ಭಾಗದ ಜನಪ್ರತಿನಿಧಿಗಳು ಹಾಗೂ ರೈತರು ಇದನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕೆಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ರೈತ ಮುಖಂಡರಾದ ಕೆ.ಟಿ.ಗಂಗಾಧರ ರವರು, ಸರ್ಕಾರಿ ಅಧಿಕಾರಿಗಳು ಮಾಡಿದ ತಪ್ಪಿನಿಂದ ದಾವಣಗೆರೆಯ ರೈತರು ಭತ್ತದ ನಾಟಿ ಮಾಡಿದ್ದಾರೆ. ಇದರಿಂದ ಭತ್ತ ನಾಟಿ ಮಾಡಿದ ರೈತರನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ಎಡದಂಡೆ ನೀರು ನಿಲ್ಲಿಸಲಾಗುತ್ತಿದೆ. ಬಲದಂಡೆಯಲ್ಲಿ ನೀರು ಕಡಿಮೆ ಮಾಡಿ, ಕೊನೆಯಲ್ಲಿ ಇರುವವರಿಗೆ ನೀರು ಕೊಡಿ ಎಂದು ಹೇಳಿದ್ದೇವೆ. ಮುಂದಿನ ಬೇಸಿಗೆಯಲ್ಲಿ ಅಡಿಕೆ ಬೆಳೆಗೆ ನೀರು ಕೊಡಲು ಸೂಚಿಸಿದ್ದೇವೆ.ಬೇಸಿಗೆಯಲ್ಲಿ ಎಲ್ಲಾ ನಗರಗಳಿಗೂ ಕುಡಿಯುವ ನೀರು ಒದಗಿಸುವಂತೆ ಮಧು ಬಂಗಾರಪ್ಪನವರಿಗೆ ತಿಳಿಸಿದ್ದೇವೆ ಎಂದರು.
ಸಭೆಯಲ್ಲಿ ತರಿಕೇರೆ ಶಾಸಕ ಸುರೇಶ್, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್, ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಶಿವಮೊಗ್ಗ ಡಿಸಿ, ದಾವಣಗೆರೆ ಡಿಸಿ ಹಾಗೂ ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಿಜೆಪಿಯವರು ರಾಮ, ಕೃಷ್ಣನನ್ನು ಬಿಟ್ಟು ಈಗ ದೇಶಕ್ಕೆ ನಾಮಕರಣ ಮಾಡಲು ಹೊರಟಿದ್ದಾರೆ: ಸಚಿವ ಮಧು ಬಂಗಾರಪ್ಪ