ಶಿವಮೊಗ್ಗ: ಸಾವಿರ ರೂ. ಬಟ್ಟೆ ಖರೀದಿಸಿದರೆ ಒಂದು ಕೆ.ಜಿ ಈರುಳ್ಳಿ ಫ್ರೀ ಅಂತಾ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಾಪಾರಿಯೊಬ್ಬರು ಆಫರ್ ಕೊಟ್ಟಿದ್ದರು. ಈರುಳ್ಳಿ ಬೆಲೆ ನೂರು ರೂ. ಗಡಿ ದಾಟಿದ್ದಾಗ ಇಂತಹ ಆಫರ್ ನೀಡಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ, ಈಗ ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯೊಂದು ಇಂತಹುದೇ ಆಫರ್ ಕೊಡುತ್ತಿದೆ.
ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಟೆಲಿಕಾಂ ಸಂಸ್ಥೆಯೊಂದು ಒಂದು ಸಿಮ್ ಕಾರ್ಡ್ ತೆಗೆದುಕೊಂಡರೆ ಒಂದು ಕೆ.ಜಿ ಈರುಳ್ಳಿಯನ್ನು ಉಚಿತವಾಗಿ ಕೊಡುವ ಆಫರ್ ಕೊಟ್ಟಿದೆ. ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಟೆಲಿಕಾಂ ಸಂಸ್ಥೆ ತಂಡ, 300 ರೂ. ಕೊಟ್ಟು ಸಿಮ್ ಖರೀದಿಸಿದರೆ, ಒಂದು ಕೆ.ಜಿ ಈರುಳ್ಳಿ ಕೊಡುವುದಾಗಿ ತಿಳಿಸಿತ್ತು. ಸಿಮ್ ಖರೀದಿಸಿದ ಕೆಲವರಿಗೆ ಉಚಿತವಾಗಿ ಈರುಳ್ಳಿಯನ್ನು ಕೊಟ್ಟಿದೆ.
ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಇಂತಹ ಆಫರ್ ನೀಡಲಾಗಿದೆ. ಟೆಲಿಕಾಂ ಸಂಸ್ಥೆಯ ಆಫರ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಎಲ್ಲ ಕಡೆ ವೈರಲ್ ಆಗುತ್ತಿದೆ.