ಶಿವಮೊಗ್ಗ: ಮಕ್ಕಳ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ, ತಮ್ಮ ಮನೆಯಲ್ಲಿ ಸಾಕಿರುವ ಎತ್ತಿನ ಜನ್ಮ ದಿನವನ್ನು ಇಡೀ ಊರಿಗೇ ಊಟ ಹಾಕಿ ಅದ್ಧೂರಿಯಾಗಿ ನಡೆಸುವುದು ಬಲು ಅಪರೂಪ. ಆದರೆ, ಶಿಕಾರಿಪುರ ತಾಲೂಕು ಕುಸ್ಕೂರು ಗ್ರಾಮದ ಕುಟುಂಬವೊಂದು ತಮ್ಮ ಮನೆಯಲ್ಲಿ ಸಾಕಿದ ಎತ್ತಿನ ಆರನೆ ವರ್ಷದ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಿದೆ.
ಈ ಎತ್ತು ಅಂತಿಂತಾ ಎತ್ತಲ್ಲ. ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಎತ್ತಿದು. ಹೌದು ಪ್ರಳಯಾಂತಕ ಹೆಸರಿನ ಈ ಎತ್ತಿನ ವಿಶೇಷವೇನು? ಅದ್ಧೂರಿಯಾಗಿ ಎತ್ತಿನ ಜನ್ಮದಿನ ಆಚರಣೆ ಮಾಡಲು ಕಾರಣವೇನು? ಎಂಬ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.
ಕುಸ್ಕೂರಿನ ಪ್ರಳಯಾಂತಕ ಎಂಬ ಹೆಸರು ಕೇಳಿದರೆ ಸಾಕು ಹೋರಿ ಹಬ್ಬದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಕಳೆದ ವರ್ಷವಷ್ಟೇ ಹೋರಿ ಹಬ್ಬದ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಕುಸ್ಕೂರಿನ ಷಣ್ಮುಖಪ್ಪ ಅವರು ಸಾಕಿರುವ ಎತ್ತು ಸೋಲು ಕಂಡಿದ್ದೇ ಇಲ್ಲ. ಇದೇ ಕಾರಣಕ್ಕೆ ಈ ಪ್ರಳಯಾಂತಕ ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿದೆ.
ಪ್ರಳಯಾಂತಕ ಅಖಾಡಕ್ಕೆ ಇಳಿಯಿತು ಎಂದರೆ ಸಾಕು ಅದೆಷ್ಟೇ ಲಕ್ಷ ಜನರು ಸೇರಿದ್ದರೂ ಹೆದರುವ ಜಾಯಮಾನವೇ ಇದರದ್ದಲ್ಲ. ತನ್ನ ಮಿಂಚಿನ ಓಟದ ಮೂಲಕ ತನ್ನ ಗುರಿ ತಲುಪಿಯೇ ತೀರುವುದು ಇದರ ವೈಶಿಷ್ಟ್ಯ. ಇದೇ ಕಾರಣಕ್ಕೆ ಪ್ರಳಯಾಂತಕ ಬಂದಿದ್ದಾನೆ ಎಂದರೆ ಸಾಕು ಅದನ್ನು ನೋಡಲು ಸಾವಿರಾರು ಮಂದಿ ಬರುವುದು ಇನ್ನೊಂದು ವಿಶೇಷ. ಇದೇ ಕಾರಣಕ್ಕೆ ಈ ಎತ್ತನ್ನು ಸಾಕಿದ ಕುಟುಂಬದವರು ಎತ್ತಿನ ಆರನೇ ವರ್ಷದ ಜನ್ಮ ದಿನವನ್ನು ಊರಿನ ಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ನೆರವೇರಿಸಿ ಧನ್ಯತಾಬಾವ ಮೆರೆದಿದ್ದಾರೆ.
ಆರನೇ ವರ್ಷದ ಜನ್ಮ ದಿನ ಅದ್ದೂರಿ: ತಮ್ಮ ಮನೆ ಮಕ್ಕಳಿಗಿಂತಲೂ ಪ್ರಳಯಾಂತಕನನ್ನು ಅತಿ ಪ್ರೀತಿಯಿಂದ ಸಾಕಿರುವ ಷಣ್ಮುಖಪ್ಪ ಹಾಗೂ ಸಹೋದರರು ಈ ಎತ್ತಿನ ನಿರ್ವಹಣೆಗಾಗಿ ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದಾರೆ. ಎತ್ತಿಗೆ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರನೇ ವರ್ಷದ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಪ್ರಳಯಾಂತಕನ ಜನ್ಮದಿನದ ವಿಶೇಷ ಆಚರಣೆ : ಎತ್ತಿಗೆ ಶೃಂಗಾರ ಮಾಡಿ ಪೂಜೆ ಸಲ್ಲಿಸಿ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ನಡೆಸಲಾಯಿತು. ಎತ್ತಿನ ಜನ್ಮ ದಿನದ ನಿಮಿತ್ತ ಊರಿನಲ್ಲಿ ಕ್ರೀಡಾಕೂಟ ನಡೆಸಿ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು. ಜೊತೆಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿರುವ ಊರಿನ ವಿದ್ಯಾರ್ಥಿಗಳಿಗೆ ಹಾಗೂ ಊರಿನ ಶತಾಯುಷಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸುವ ಮೂಲಕ ಹಾಗೂ ಕಾರ್ಯಕ್ರಮದಲ್ಲಿ ನೆರೆದಿದ್ದ ಐದುನೂರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಪ್ರಳಯಾಂತಕನ ಜನ್ಮ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಅಖಾಡಗಳನ್ನು ಧೂಳಿಪಟ ಮಾಡುವ ವಿಶ್ವಾಸ: ಪ್ರಳಯಾಂತಕ ಹೋರಿಯ ಜನ್ಮ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಿಂದ ಕುಸ್ಕೂರಿಗೆ ಆಗಮಿಸಿದ್ದ ಪ್ರಳಯಾಂತಕನ ಅಭಿಮಾನಿಗಳು ತಾವೂ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಎರಡು ತಿಂಗಳಿನಲ್ಲಿ ಮತ್ತೆ ಹೋರಿ ಹಬ್ಬ ಆರಂಭಗೊಳ್ಳಲಿದ್ದು, ಎಲ್ಲ ಅಖಾಡಗಳನ್ನು ಧೂಳಿಪಟ ಮಾಡುವ ವಿಶ್ವಾಸದಲ್ಲಿ ಪ್ರಳಯಾಂತಕನಿದ್ದಾನೆ.