ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಯ ಸೋಲಿನ ಭಯದಿಂದಾಗಿ ಕಾಂಗ್ರೆಸ್ ಮತದಾರರ ಮಾಹಿತಿ ಕಳವು ಆರೋಪವನ್ನು ಬಿಜೆಪಿ ಮೇಲೆ ಹೊರಿಸುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿರುಗೇಟು ಕೊಟ್ಟರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಮತದಾರರ ಪಟ್ಟಿ ದುರ್ಬಳಕೆ ಕುರಿತು ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ತಕ್ಕ ಉತ್ತರ ಕೊಟ್ಟಿದ್ದಾರೆ. ಇದರಿಂದ ಕಾಂಗ್ರೆಸ್‌ನವರು ಚುನಾವಣೆಯ ಸೋಲು ಒಪ್ಪಿಕೊಂಡು ಆರೋಪ ಮಾಡುತ್ತಿರುವುದು ಸ್ಟಷ್ಟವಾಗಿದೆ. ಇದು ಕಾಂಗ್ರೆಸ್ ಮುಖಂಡರಿಗೆ ಶೋಭೆ ತರುವುದಿಲ್ಲ. ಏನಾದರೂ ಲೋಪದೋಷವಿದ್ದಲ್ಲಿ ಅದನ್ನು ಸಿಎಂ ಸರಿಪಡಿಸುವುದಾಗಿ ತಿಳಿಸಿದ್ದು, ಸಾಕ್ಷ್ಯಾಧಾರ ಇದ್ದರೆ ನೀಡಿ ತನಿಖೆ ಮಾಡಿಸೋಣ ಎಂದು ಹೇಳಿದ್ದಾರೆ. ಕಾಂಗ್ರೆಸ್ನವರಿಗೆ ಈಗಾಗಲೇ ಸೋಲು ಖಚಿತ ಎಂಬುದು ತಿಳಿದಿದೆ. ನಾವು ನೂರಕ್ಕೆ ನೂರು ಸ್ಪಷ್ಟ ಬಹುಮತ ಪಡೆಯುತ್ತೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪ್ರಧಾನಿ ಮೋದಿ ಅವರ ಆಡಳಿತವನ್ನು ಇಡೀ ದೇಶವೇ ಮೆಚ್ಚಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನವರು ತಬ್ಬಲಿಯಂತೆ ಅಲೆಯುತ್ತಿದ್ದಾರೆ. ಅವರಿಗೆ ಯಾವುದೇ ನಾಯಕತ್ವ ಇಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲದೇ ಇಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಸಿದ್ಧರಾಮಯ್ಯ ಎಲ್ಲಿ ಸ್ಪರ್ಧಿಸಬೇಕೆಂಬುದು ಅವರಿಗೆ ಬಿಟ್ಟ ವಿಚಾರವಾಗಿದೆ. ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಿದ್ದಾರೆ. ಒಬ್ಬ ವಿಪಕ್ಷದ ನಾಯಕರಾಗಿರುವ ಅವರ ಬಗ್ಗೆ ನಾನು ಹಗುರವಾಗಿ ಮಾತನಾಡಲ್ಲ. ಅವರಿಗೆ ಎಲ್ಲಿ ಸೂಕ್ತವೋ ಅಲ್ಲೇ ನಿಂತು ಸ್ಪರ್ಧಿಸಲಿ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಕೇಂದ್ರದ ಅಧ್ಯಕ್ಷರ ಜೊತೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 2/3 ಮೆಜಾರಿಟಿಯಲ್ಲಿ ಗೆಲ್ಲಲಿದ್ದೇವೆ ಎಂದರು.
ಇದನ್ನೂ ಓದಿ: ಮತದಾರರ ಮಾಹಿತಿ ಕಳ್ಳತನ ಆರೋಪ: ಸಮಗ್ರ ತನಿಖೆಗೆ ಸಿಎಂ ಸೂಚನೆ