ಶಿವಮೊಗ್ಗ: ನಾಳೆಯಿಂದಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಅಭಿವೃದ್ಧಿಗೆ ಆದಷ್ಟು ಶ್ರಮ ವಹಿಸಿದ್ದೇನೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ ಏರ್ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ಪ್ರಾರಂಭ ಮಾಡುವುದಕ್ಕೆ ಮತ್ತು ಸಾವಿರಾರು ಜನರಿಗೆ ಉದ್ಯೋಗ ಕೊಡಲು ಅನುಕೂಲವಾಗುತ್ತದೆ ಎಂದರು.
ನೀರಾವರಿ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಪ್ರಗತಿ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮುಖ್ಯಮಂತ್ರಿ ಆಗಿ ಜಿಲ್ಲೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ನಾನು ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದೇನೆ, ಆದರೆ ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಬಲಪಡಿಸಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ. ಆ ದಿಕ್ಕಿನಲ್ಲಿ ನಾಳೆಯಿಂದಲೇ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.
ಯಾರೂ ಕೂಡ ಯಡಿಯೂರಪ್ಪ ಮನೆಯಲ್ಲಿ ಕುಳಿತಿದ್ದಾನೆ ಅಂತ ಭಾವಿಸುವುದು ಬೇಡ. ನನ್ನ ಕೈ ಕಾಲು ಗಟ್ಟಿ ಇರುವವರೆಗೂ ಪಕ್ಷ ಬಲಪಡಿಸಲು ಕೆಲಸ ಮಾಡುತ್ತೇನೆ. ಪಕ್ಷ ನನಗೆ ಬಹಳಷ್ಟು ಕೊಟ್ಟಿದೆ. ಪಕ್ಷದ ಋಣ ತೀರಿಸುವ ಕೆಲಸವನ್ನು ಬದುಕಿನ ಕೊನೆಯವರೆಗೂ ಮಾಡಿದರೂ ಕಡಿಮೆಯೇ. ಹಾಗಾಗಿ ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ನಿನ್ನೆ ಪ್ರಧಾನಿಯವರು ನನ್ನ ಜೊತೆ ಆತ್ಮೀಯವಾಗಿ ನಡೆದುಕೊಂಡರು. ಮೊದಲಿನಿಂದಲೂ ನನ್ನನ್ನು ಕಂಡರೆ ಅವರಿಗೆ ಬಹಳ ಪ್ರೀತಿ ಮತ್ತು ವಿಶ್ವಾಸ. ಅವರು ಕೊಟ್ಟಿರುವ ಪ್ರೀತಿ, ವಿಶ್ವಾಸವನ್ನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ನಾನು ಎಂದಿಗೂ ಅವರಿಗೆ ಋಣಿಯಾಗಿರುತ್ತೇನೆ. ಬರುವಂತಹ ದಿನಗಳಲ್ಲಿ ಅವರ ಅಪೇಕ್ಷೆಯಂತೆ ರಾಜ್ಯದಲ್ಲಿ ಪಕ್ಷ ಕಟ್ಟಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಅದೇ ನಾನು ಅವರಿಗೆ ಕೊಡುವಂತಹ ಕೊಡುಗೆ ಎಂದು ಹೇಳಿದರು.
ಮಲೆನಾಡು ಮಠಾಧೀಶರಿಂದ ಬಿಎಸ್ವೈಗೆ ಸನ್ಮಾನ: ಮಲೆನಾಡು ಭಾಗದ ಮಠಾಧೀಶರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸನ್ಮಾನ ಮಾಡಲಾಯಿತು. ಶಿವಮೊಗ್ಗದ ಬೆಕ್ಕಿನ್ ಕಲ್ಮಠದಲ್ಲಿ ಜಿಲ್ಲೆಯ ಮಲೆನಾಡು ಮಠಾಧೀಶರ ಪರಿಷತ್ ವತಿಯಿಂದ ಸುಮಾರು 37 ಮಠಾಧೀಶರು ಹುಟ್ಟುಹಬ್ಬ ಹಾಗೂ ವಿಮಾನ ನಿಲ್ದಾಣದ ನಿರ್ಮಾಣದ ಹಿನ್ನೆಲೆಯಲ್ಲಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಮಠ - ಮಂದಿರಗಳಿಗೆ ಅನುದಾನ ನೀಡುವ ಕೆಲಸವನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ಅದರಂತೆ ಈಗ ಸಿಎಂ ಬಸವರಾಜ ಬೊಮ್ಮಾಯಿ ಸಹ ಮಠ, ಮಂದಿರಗಳಿಗೆ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಜೋಗ ಜಲಪಾತದ ಅಭಿವೃದ್ಧಿ, ಅಕ್ಕಮಹಾದೇವಿ ಜನ್ಮಸ್ಥಳದ ಅಭಿವೃದ್ಧಿ ಹೇಗೆ ಆಗುತ್ತೆ ಎನ್ನುವುದನ್ನು ನೀವೇ ನೋಡುವಿರಿ. ಮುಂಬರುವ ದಿನಗಳಲ್ಲಿ ಸಹ ಜಿಲ್ಲೆಯಲ್ಲಿ ಆಗಬೇಕಾದ ಕೆಲಸವನ್ನು ಎಲ್ಲರ ಸಹಕಾರದೊಂದಿಗೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ, ಡಿ.ಎಸ್ ಅರುಣ್, ಮಾಜಿ ಸೂಡಾ ಅದ್ಯಕ್ಷ ಜ್ಯೋತಿ ಎಸ್ ಪ್ರಕಾಶ್ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶಿವಮೊಗ್ಗಕ್ಕೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ತರುವಲ್ಲಿ ಯಶಸ್ವಿ: ಆರಗ ಜ್ಞಾನೇಂದ್ರ