ಶಿವಮೊಗ್ಗ: ಶಿರಾ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಯಾವುದೇ ಓರ್ವ ವ್ಯಕ್ತಿಯ ಪ್ರಯತ್ನದಿಂದ ಗೆಲುವು ಸಾಧಿಸಿಲ್ಲ. ಬದಲಾಗಿ, ಸಂಘಟನೆಯ ಪ್ರಯತ್ನದಿಂದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರಯತ್ನದಿಂದ ಗೆಲುವು ಸಾಧ್ಯವಾಯಿತು ಎಂದು ಕೆಲವು ಮಾಧ್ಯಮಗಳಲ್ಲಿ ವೈಭವೀಕರಿಸುವ ಪ್ರಯತ್ನ ನಡೆಯಿತು. ಆದ್ರೆ, ಬಿಜೆಪಿ ಸಂಘಟನೆಯ ಪ್ರಯತ್ನದಿಂದ ಚುನಾವಣೆಯಲ್ಲಿ ಗೆದ್ದಿದೆ ಎಂದು ತಿಳಿಸಿದರು.
ಉಪ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸುರೇಶಗೌಡ, ಬಿ.ವೈ. ವಿಜಯೇಂದ್ರ ಸೇರಿದಂತೆ ನಾಲ್ಕು ಪ್ರಮುಖರನ್ನು ನೇಮಕ ಮಾಡಿದ್ದೆವು. ಎಲ್ಲರೂ ಅಲ್ಲಿಯೇ ಬೀಡು ಬಿಟ್ಟು ಕೆಲಸ ಮಾಡಿದ್ದಾರೆ. ಸಂಘಟನೆ ಪ್ರಯತ್ನದಿಂದ ಗೆಲುವು ಸಾಧ್ಯವಾಯ್ತು ಎಂದರು.
ಅದೇ ರೀತಿ ಆರ್ಆರ್ ನಗರದಲ್ಲಿ ಸಚಿವ ಆರ್. ಅಶೋಕ್, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಪರಿಷತ್ ಚುನಾವಣೆಯಲ್ಲೂ ಸಹ ಅದೇ ಪ್ರಯತ್ನ ಮಾಡಿದ್ದೇವೆ. ಹಾಗಾಗಿಯೇ ಎಲ್ಲಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.
ಬಿ.ವೈ. ವಿಜಯೇಂದ್ರ ಅವರ ಪ್ರಯತ್ನ ಇಲ್ಲವೆಂದು ಹೇಳುತ್ತಿಲ್ಲ. ಆದ್ರೆ, ಮಾಧ್ಯಮದವರು ವೈಭವೀಕರಿಸುತ್ತೀರಿ. ನಾವು ಏನು ಮಾಡುವುದಕ್ಕೆ ಆಗಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.