ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರ ಶಿಕಾರಿಪುರಕ್ಕೆ ಬಿ ವೈ ವಿಜಯೇಂದ್ರ ಆಗಮಿಸಿದ ಹಿನ್ನೆಲೆ, ಶಿಕಾರಿಪುರ ತಾಲೂಕು ಬಿಜೆಪಿ ಘಟಕದಿಂದ ಭರ್ಜರಿ ಸ್ವಾಗತ ಕೋರಿದರು. ಶಿಕಾರಿಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗ ಬಿ ವೈ ವಿಜಯೇಂದ್ರ ಅವರಿಗೆ ಸ್ವಾಗತ ಕೋರಿದ ಕಾರ್ಯಕರ್ತರು, ತೆರೆದ ವಾಹನದಲ್ಲಿ ಬೈಕ್ ರ್ಯಾಲಿಯ ಮೂಲಕ ಶಿಕಾರಿಪುರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿದರು. ನಂತರ ಶಿಕಾರಿಪುರದ ಹಳೆ ಸಂತೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಕೇಂದ್ರ ಸಂಸದಿಯ ಮಂಡಳಿ ಸದಸ್ಯರಾದ ಬಿ ಎಸ್ ಯಡಿಯೂರಪ್ಪ, ದೇವದುರ್ಲಬ ಕಾರ್ಯಕರ್ತರಿಂದ ವಿಜಯೇಂದ್ರ ಶಾಸಕರಾಗಿದ್ದಾರೆ. ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆಯಾಗಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ 28 ಸ್ಥಾನ ಗೆದ್ದು, ಮೋದಿ ಅವರಿಗೆ ಕೊಡುಗೆ ಕೊಡಬೇಕಿದೆ ಎಂದು ಹೇಳಿದರು.
ಉಡುಗುಣಿ, ತಾಳಗುಂದ, ಹೊಸೂರಿಗೆ 1.500 ಕೋಟಿ ರೂ. ಬಿಡುಗಡೆ ಮಾಡಿಸಿ ಕೆರೆ ತುಂಬಿಸಲಾಗಿದೆ. ನಿಮ್ಮೆಲ್ಲರ ಹಾಗೂ ಮೋದಿ, ಅಮಿತ್ ಷಾ ನಡ್ಡಾ ಅವರ ಆಶೀರ್ವಾದದಿಂದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ, ಅಶೋಕ ಅವರು ರಾಜ್ಯ ಪ್ರವಾಸ ಮಾಡಿ, ಬಿಜೆಪಿ ಮುಂದೆ ಯಾರು ಪೈಪೋಟಿ ನೀಡದಂತೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ರೈತ ನೆಮ್ಮದಿಯಿಂದ ಬದುಕದ ಹಾಗೆ ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇರುವಂತದ್ದಕ್ಕೆ ಕಲ್ಲು ಹಾಕಬೇಡಿ. ವಿಜಯೇಂದ್ರ ಅವರು ಪಕ್ಷವನ್ನು ಇನ್ನಷ್ಟು ಬಲಪಡಿಸಲಿದ್ದಾರೆ ಎಂದು ಹೇಳಿದರು.
ವಿಜಯೇಂದ್ರ ಹಾಗೂ ನನ್ನದು ನಿಜವಾದ ಜೋಡೆತ್ತು: ಆರ್ ಅಶೋಕ್ ಮಾತನಾಡಿ, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಆರು ತಿಂಗಳಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಆಗಿರಲಿಲ್ಲ. ಕಾಂಗ್ರೆಸ್ ಆಡಳಿತವನ್ನು ಹೋಗಲಾಡಿಸಲು ಜೋಡಿಬೇಕೆಂದು ನನ್ನನ್ನು ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ. ಹಿಂದೆ ಒಂದು ಜೋಡೆತ್ತುಗಳಿದ್ದವು. ಸಿದ್ದರಾಮಯ್ಯ ಹಾಗೂ ಡಿಕೆಶಿ. ಈಗ ಅಧಿಕಾರಕ್ಕೆ ಬಂದ ನಂತರ ಒಂದು ಎತ್ತು ನೀರಿಗೆಳೆದರೆ, ಇನ್ನೂಂದು ಏರಿಗೆ ಎಳೆಯುತ್ತಾ ಅಧಿಕಾರಕ್ಕಾಗಿ ಹೊಡೆದಾಡುತ್ತಿದ್ದಾರೆ ಎಂದರು.
ವಿಜಯೇಂದ್ರ ಹಾಗೆ ಏನೂ ಸುಮ್ಮನೆ ರಾಜ್ಯಾಧ್ಯಕ್ಷರಾಗಿ ಬಂದಿಲ್ಲ. ಅವರು ಯುವ ಮೋರ್ಚಾದಲ್ಲಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷರಾದ ಮೇಲೆ ಅಧ್ಯಕ್ಷರಾಗಬೇಕಲ್ಲವೆ?. ಅದೇ ರೀತಿ ವಿಜಯೇಂದ್ರ ನಮ್ಮ ಅಧ್ಯಕ್ಷರಾಗಿದ್ದಾರೆ. ನಾನು ಪ್ರವಾಸ ಮಾಡಿದ ಕಡೆ ಬಿಜೆಪಿಯ ಹವಾ ಇದೆ ಎಂದರು. ನನಗೆ ಟಿಕೆಟ್ ನೀಡಿದ್ದು ಯಡಿಯೂರಪ್ಪ ಅವರು. ಕೆಲವರು ನನಗೆ ಟಿಕೇಟ್ ನೀಡಬೇಡಿ ಎಂದಾಗ ಯಾರ ಮಾತನ್ನು ಕೇಳದೇ, ನನಗೆ ಟಿಕೇಟ್ ನೀಡಿ ಗೆಲ್ಲಿಸಿಕೊಂಡರು ಎಂದು ತಮ್ಮ ಹಾಗೂ ಯಡಿಯೂರಪ್ಪ ಸಂಬಂಧವನ್ನು ಮೆಲುಕು ಹಾಕಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದ ಕಥೆ ನೆನಪಿಸಿಕೊಂಡರು. ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಯಡಿಯೂರಪ್ಪ ಅವರನ್ನು ನೋಡಿ ಕಲಿಯಬೇಕು. ಇಂದು ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಇದೆ ಎಂದರೆ ಅದು ಯಡಿಯೂರಪ್ಪ ಅವರಿಂದ ಎಂದರು. ಹೊಸ ಸರ್ಕಾರ ಬಂದು ಜನರಿಗೆ ಏನ್ ಮಾಡಿದೆ ಎಂದು ಪ್ರಶ್ನೆ ಮಾಡಿದರು. ಶಾಲೆ, ಆಸ್ಪತ್ರೆ, ರಸ್ತೆಗೆ ಹಣ ಬಿಡುಗಡೆ ಆಗಿಲ್ಲ. ಕಾಂಗ್ರೆಸ್ ಶಾಸಕರು ಒಂದು ವರ್ಷ ಏನೂ ಮಾಡಲು ಆಗುವುದಿಲ್ಲ ಎಂದರು. ಈಗ ಕರೆಂಟ್ ಖಾಲಿಯಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಪ್ರವಾಹ ಸಂದರ್ಭದಲ್ಲಿ ಡಬಲ್ ಹಣ ಬಿಡುಗಡೆ ಮಾಡಿದ್ದೆವು. ನಾವು ಒಂದೇ ತಿಂಗಳಲ್ಲಿ ಹಣ ಬಿಡುಗಡೆ ಮಾಡಿದ್ದೆವು. ನಿಮಗೆ ಏಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಲಿದ್ದೇವೆ: ವಿದ್ಯಾರ್ಥಿ ವೇತನ, ವೈದ್ಯರಿಗೆ ಸ್ಟೆ ಫಂಡ್ ನೀಡಿಲ್ಲ. ನಾನು, ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಆಶೀರ್ವಾದದಿಂದ ಪಕ್ಷ ಕಟ್ಟುತ್ತೇವೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಆರು ಭಾಗವಾಗಿದೆ. ಹಲೋ ಅಪ್ಪ ಎಂದು ಕಾಂಗ್ರೆಸ್ ಅನ್ನು ಕಿಚಾಯಿಸಿದರು. ಯಾವುದಕ್ಕೂ ಹಣ ಬಿಡುಗಡೆ ಮಾಡುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ ಬರಬೇಕಿತ್ತು. ಆದರೆ ಸರ್ಕಾರ ಏನ್ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಲೂಟಿ ಮಾಡಲು ಹೊರಟಿದೆ. ಇವರ ಲೂಟಿ ತಡೆಯುತ್ತೇವೆ. ನಾನು ವಿಜಯೇಂದ್ರ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ. ಬೆಳಗಾವಿ ಅಧಿವೇಶನಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪುಂಗಿ ಬಂದ್ ಆಗಲಿದೆ: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಬೆವರಿನಿಂದ ಎದ್ದು ಬಂದವರು ಯಾರಾದರೂ ಇದ್ರೆ ಅವರು ಯಡಿಯೂರಪ್ಪ ಮಾತ್ರ. ಯಡಿಯೂರಪ್ಪ ಅವರು ಯಾವುದೋ ಒಂದು ಜಾತಿಗೆ ಕಾರ್ಯಕ್ರಮ ನೀಡಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರವನ್ನು ಶಿಕಾರಿಪುರದಿಂದ ನೀಡಬೇಕು ಎಂದರು.
ಶಿಕಾರಿಪುರ ಮತದಾರರ ಆಶೀರ್ವಾದದಿಂದ ನಾನು ಇಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೇನೆ. ನಮ್ಮ ತಂದೆಯವರು 28 ಸ್ಥಾನ ಗೆಲ್ಲುವ ತನಕ ಪ್ರವಾಸ ಮಾಡಬೇಕೆಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಆದ ಮೇಲೆ ಶಿಕಾರಿಪುರದ ಕ್ಷೇತ್ರಕ್ಕೆ ಗಮನ ನೀಡುವೆ ಎಂದರು. ಅಧಿಕಾರಕ್ಕೆ ಬಂದು ಬೀಗುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ತಕ್ಕ ಉತ್ತರ ನೀಡಲು ನಾನು ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಫೋಟೋಗೆ ಪೂಜಿಸಬೇಕು: ಶಿಕಾರಿಪುರ ಶೇ. 100 ರಷ್ಟು ಅಭಿವೃದ್ಧಿ ಆಗಿದೆ. ಆದರೆ ಶಿಕಾರಿಪುರದ ಕಾಂಗ್ರೆಸ್ ಪುಡಾರಿಗಳು ಬಾಲ ಬಿಚ್ಚುತ್ತಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಪುಡಾರಿಗಳ ಪುಂಗಿ ಬಂದ್ ಆಗಲಿದೆ. ನಮ್ಮ ಕುಟುಂಬದವರು ಎಷ್ಟೇ ಜನ್ಮ ಎತ್ತಿ ಬಂದರು ಸಹ ಶಿಕಾರಿಪುರದ ಮತದಾರರ ಕಾರ್ಯಕರ್ತರನ್ನು ಮರೆಯುವುದಿಲ್ಲ ಎಂದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನನ್ನನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ಮುಂಬರುವ ಅಧಿವೇಶನಲ್ಲಿ ನಾನು ಆರ್. ಅಶೋಕ್ ಸರ್ಕಾರವನ್ನು ಬಗ್ಗಿಸುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ಶಿಕಾರಿಪುರದಲ್ಲಿ ಅಭಿವೃದ್ಧಿ ಮಾಡಿರುವ ಯಡಿಯೂರಪ್ಪ ಫೋಟೋವನ್ನು ಇಟ್ಟು ಪೂಜೆ ಮಾಡಬೇಕು ಎಂದರು.
ಶಿಕಾರಿಪುರದ ಸಮಸ್ಯೆ ಪರಿಹರಿಸುತ್ತೇನೆ: ತಾಲೂಕಿನಲ್ಲಿ ಬಸ್ಗಳಿಲ್ಲದೇ, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ನಾನು ರಾಜ್ಯದ ಯಾವುದೇ ಮೂಲೆಯಲ್ಲಿ ಇದ್ದರೂ ಸಹ ಶಿಕಾರಿಪುರದ ಸಮಸ್ಯೆಯನ್ನು ಪರಿಹರಿಸುತ್ತೇನೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಂತೆ ಶಿಕಾರಿಪುರ ಕ್ಷೇತ್ರ ನಮ್ಮ ನಿರೀಕ್ಷೆಯಂತೆ ಮುನ್ನಡೆಗೆ ಬರುತ್ತಿಲ್ಲ. ಇಂದು ನಡೆದ ಅಭಿನಂದನೆ ನನಗೆ, ಅಶೋಕ್ ಅವರಿಗಲ್ಲ, ಶಿಕಾರಿಪುರದ ಜನತೆಗೆ ಎಂದರು. ಈ ವೇಳೆ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಬಿ. ಸಿ ಪಾಟೀಲ್, ಎಂ. ಪಿ ರೇಣುಕಾಚಾರ್ಯ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಇದನ್ನೂ ಓದಿ : ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ: ಬಿ.ವೈ.ವಿಜಯೇಂದ್ರ