ಶಿವಮೊಗ್ಗ : ನಾನು ರಾಜ್ಯ ಪ್ರವಾಸ ನಡೆಸಿದ್ದೇನೆ, 80ರಿಂದ 85 ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಬಂದಿದ್ದೇನೆ. ಈ ಬಾರಿ ಯಾರ ಹಂಗಿಲ್ಲದೇ ಸ್ವತಂತ್ರವಾಗಿ ಬಿಜೆಪಿ ಸರ್ಕಾರ ಬರೋದು ನಿಶ್ಚಿತ, 130 -135 ಸ್ಥಾನ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ ನುಡಿದರು.
ಶಿವಮೊಗ್ಗದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ನಡೆದ ವಿಪ್ರ ಬಾಂಧವರ ಸ್ನೇಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸಚಿವರನ್ನು ರಾಜ್ಯಕ್ಕೆ ಪ್ರಚಾರ ಮಾಡಲು ಕಳುಹಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿ ಬಂದಿದ್ದರು. ಆ ದಿನ 3-4 ಲಕ್ಷ ಜನ ಸೇರಿದ್ದರು. ಅಷ್ಟೊಂದು ಬೆಂಬಲ ಮೋದಿ, ಅಮಿತ್ ಶಾ ಅವರಿಗಿದೆ. ಈಗ ರಾಜ್ಯದಲ್ಲಿ ಮೋದಿಯವರೇ ಪ್ರಚಾರ ಮಾಡುತ್ತಿದ್ದಾರೆ. ಅನೇಕ ಕಡೆ ರೋಡ್ ಶೋ ನಡೆಸುತ್ತಿದ್ದಾರೆ. ಇದನ್ನು ಗಮನಿಸಿದರೆ ಮೋದಿಯವರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂಬ ಅಪೇಕ್ಷೆ ಇದೆ" ಎಂದರು.
"ರಾಜ್ಯದ ಎಲ್ಲಾ ಭಾಗಗಳಲ್ಲಿಗೆ ಮೋದಿ ಓಡಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಶಿವಮೊಗ್ಗ ಕ್ಷೇತ್ರದ ಚನ್ನಬಸಪ್ಪ ಗೆಲುವು ನೂರಕ್ಕೆ ನೂರರಷ್ಟು ನಿಶ್ಚಿತವಾಗಿದೆ. ಪ್ರಾಮಾಣಿಕ, ಸಜ್ಜನ ವ್ಯಕ್ತಿಯನ್ನು ಇಲ್ಲಿ ನಿಲ್ಲಿಸಿದ್ದೇವೆ. ಮುಖ್ಯಮಂತ್ರಿ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೆನು. 50 ಕೋಟಿ ಅನುದಾನ ಮೀಸಲಿಡಲಾಗಿದೆ. ಮುಂದಿನ ಬಾರಿ ನಮ್ಮದೇ ಸರ್ಕಾರ ಬರಲಿದೆ. ನಿಮ್ಮೆಲ್ಲಾ ಉಳಿದ ಬೇಡಿಕೆ ಈಡೇರಿಸುತ್ತೇವೆ" ಎಂಬ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ನಟಿ ಮಾಳವಿಕ ಅವಿನಾಶ್, "ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಯಡಿಯೂರಪ್ಪನವರು. ಯಡಿಯೂರಪ್ಪನವರು ಅಭಿವೃದ್ಧಿಯ ಹರಿಕಾರ. ಅವರು ಶಿವಮೊಗ್ಗ ಜಿಲ್ಲೆಯ ಸಕಲ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ವತಂತ್ರ ಸರ್ಕಾರ ಬಂದರೆ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಹೀಗಾಗಿ, ಪ್ರತಿಯೊಬ್ಬರು ಶ್ರಮ ಹಾಕಬೇಕಿದೆ. ರಾಜ್ಯದಲ್ಲಿ ಸದೃಢವಾದ ಬಿಜೆಪಿ ಸರ್ಕಾರ ಬರಬೇಕು. ವಿಪ್ರ ಸಮಾಜದ ಬಹಳ ವರ್ಷದ ಕನಸು ನನಸಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದಾರೆ" ಎಂದರು.
ಇದನ್ನೂ ಓದಿ : ಜೆಡಿಎಸ್ಗೆ ಮತ ಹಾಕಿದ್ರೆ ಕಾಂಗ್ರೆಸ್ಗೆ, ಕಾಂಗ್ರೆಸ್ಗೆ ಹಾಕಿದ್ರೆ ಪಿಎಫ್ಐಗೆ ಮತ ಹಾಕಿದಂತೆ: ನಡ್ಡಾ
"ಪ್ರಧಾನಿ ಮೋದಿಯವರು EWS ಕೊಡುವ ಧೈರ್ಯ ಮಾಡಿದರು. ಯಾರ ಮೀಸಲಾತಿಯನ್ನು ಸರ್ಕಾರ ವಾಪಸ್ ಪಡೆದಿಲ್ಲ. ಪಿಎಫ್ಐ ದೇಶ ವಿರೋಧಿ ಚಟುವಟಿಕೆಯಲ್ಲಿ, ಭಯೋತ್ಪಾದನೆಯಲ್ಲಿ ತೊಡಗಿದ್ದ ಸಂಘಟನೆ ಆಗಿತ್ತು. ಈ ಸಂಘಟನೆಯಿಂದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 22 ಜನ ಹಿಂದೂ ಯುವಕರ ಕಗ್ಗೋಲೆ ಆಯ್ತು. ಪಿಎಫ್ಐ ಜೊತೆ ಭಜರಂಗದಳ ಹೋಲಿಸಿ ಮಾತನಾಡಿದ್ದು ಅಪರಾಧ. ಟಿಪ್ಪು ಜಯಂತಿ ಮಾಡುವ ಮೂಲಕ ಸಿದ್ದರಾಮಯ್ಯ ಓಲೈಕೆ ರಾಜಕಾರಣ ಮಾಡಿದರು. ಟಿಪ್ಪು ಜಯಂತಿಯನ್ನು ಯಡಿಯೂರಪ್ಪ ರದ್ದು ಮಾಡಿದರು. ಕಾಂಗ್ರೆಸ್ನವರು ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಇದೆಲ್ಲಾ ನೆನಪಿಟ್ಟುಕೊಂಡು ಮತ ಚಲಾಯಿಸಬೇಕಿದೆ" ಎಂದು ಕರೆನೀಡಿದರು. ಸಭೆಯಲ್ಲಿ ಹಲವು ವಿಪ್ರರು ಭಾಗಿಯಾಗಿದ್ದರು.