ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಈ ವರ್ಷದ ಕೊನೆಯ ಮನ್ ಕಿ ಬಾತ್ನ 96ನೇ ಆವೃತ್ತಿಯಲ್ಲಿ ಮಲೆನಾಡಿನ ಅಡಿಕೆ ಹಾಳೆಯಿಂದ ಪರಿಸರಸ್ನೇಹಿ ಉತ್ಪನ್ನ ತಯಾರು ಮಾಡುವ ಉದ್ಯಮಿ ಸುರೇಶ್ ಹಾಗೂ ಮೈಥಿಲಿ ದಂಪತಿಯ ಹೆಸರನ್ನು ಪ್ರಸ್ತಾಪಿಸಿ, ಸ್ಟಾರ್ಟ್ ಅಪ್‌ನಡಿ ಉದ್ಯಮ ಮಾಡುತ್ತಿರುವ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಸುರೇಶ್ ಮತ್ತು ಪತ್ನಿ ಮೈಥಿಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಹೆಸರು ಹಾಗೂ ತಮ್ಮ ಉತ್ಪನ್ನದ ಬಗ್ಗೆ ಮೋದಿ ಅವರು ಮನ್ ಕಿ ಬಾತ್ನಲ್ಲಿ ಹೇಳಿದ್ದು ತಮಗೆ ತುಂಬಾ ಸಂತೋಷವಾಗಿದೆ. ಅವರು ನಮ್ಮ ಹೆಸರನ್ನು ಪ್ರಸ್ತಾಪಿಸುತ್ತಾರೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದರು. ಸುರೇಶ್ ದಂಪತಿ ಅಡಿಕೆ ಮರದಿಂದ ಬೀಳುವ ಹಾಳೆಯಿಂದ ಪರಿಸರಸ್ನೇಹಿ ಉತ್ಪನ್ನಗಳಾದ ಪೆನ್ ಸ್ಟ್ಯಾಂಡ್, ಪರ್ಸ್, ಚಪ್ಪಲಿ, ಡೈರಿ ಹಾಗು ಲೈಟ್ ಸ್ಟ್ಯಾಂಡ್ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ.
ಸುರೇಶ್ ಅವರ ಪರಿಚಯ: ಸುರೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪದ ಸುಣಕುರುಡಿ ಗ್ರಾಮದವರು. ಇವರು ತಮ್ಮ ವಿದ್ಯಾಭ್ಯಾಸ ಮುಗಿಸಿ ಶಿವಮೊಗ್ಗಕ್ಕೆ ಬಂದು ಮೊದಲು ಕಂಪ್ಯೂಟರ್ ಬಿಸ್ನೆಸ್ ಮಾಡುತ್ತಿದ್ದರು. ನಂತರ ಒಂದು ಬಿಪಿಒ ಕಂಪನಿ ಶುರು ಮಾಡಿದ್ದರು. ಇದಾದ ನಂತರ ಅಡಿಕೆ ಉತ್ಪನ್ನದಿಂದ ಏನಾದರೂ ಮಾಡಬೇಕೆಂಬ ಒಲವು ಹೊಂದಿದ್ದರು.
ಅಡಿಕೆ ಉತ್ಪನ್ನದ ಕಡೆಗಿರುವ ಇವರ ಉತ್ಸಾಹ ಕಂಡು ಶಿವಮೊಗ್ಗ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ಹೇಮಂತ್ ತೇಲ್ಕರ್ ಎಂಬುವವರು ನೆದರ್ಲ್ಯಾಂಡ್ ಮೂಲದ ವ್ಯಕ್ತಿಯೊಬ್ಬರ ಬಗ್ಗೆ ತಿಳಿಸಿ ಅವರ ಬಗೆಗಿನ ಮಾಹಿತಿ ನೀಡಿ ಸಂಪರ್ಕಿಸಲು ಹೇಳಿದ್ದರಂತೆ. ಅದರಂತೆ ಅವರನ್ನು ಸಂಪರ್ಕಿಸಿದಾಗ ಅವರು ಅಡಿಕೆ ಹಾಳೆಯಿಂದ ಯಾವ ರೀತಿಯ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದೆಂದು ಮಾಹಿತಿ ನೀಡಿದ್ದಾರೆ. ಅದರಂತೆ ಪಾಮ್ ಲೆದರ್ ಬಳಕೆ ಮಾಡಿ ಕೊಂಡು ಉತ್ಪನ್ನ ತಯಾರು ಮಾಡುತ್ತಿದ್ದು, ತಮ್ಮ ಕಂಪನಿಗೆ ಭೂಮಿ ಅಗ್ರಿವೆಂಚರ್ ಎಂದು ಹೆಸರಿಟ್ಟಿರುವುದಾಗಿ ಸುರೇಶ್ ತಿಳಿಸಿದ್ದಾರೆ.
ಕೇಂದ್ರದ ರಫ್ತಾರ್ ಯೋಜನೆಯಡಿ ಅನುಕೂಲ: ಕೇಂದ್ರ ಸರ್ಕಾರದ ರಫ್ತಾರ್ ಯೋಜನೆ ಇದ್ದು ತಮ್ಮ ಉದ್ಯಮಕ್ಕೆ ಸಹಾಯಕವಾಗಲಿದೆ ಎಂದು ಕೃಷಿ ಕಾಲೇಜಿನ ಡಾ.ಶಶಿಧರ್ ಅವರು ತಿಳಿಸಿದ ಮೇಲೆ ಯೋಜನೆಯ ಲಾಭ ಪಡೆಯಲು ಅರ್ಜಿ ಹಾಕಿದ್ದೆ. ಇದರಡಿಯಲ್ಲಿ ತರಬೇತಿ ಪಡೆದೆ. ತಮ್ಮ ಉತ್ಪನ್ನಗಳಿಗೆ ರಫ್ತಾರ್ನಲ್ಲಿ ಒಪ್ಪಿಗೆ ಸಿಕ್ಕು ಉದ್ಯಮಕ್ಕಾಗಿ 25 ಲಕ್ಷ ರೂ ಅನುದಾನ ನೀಡುತ್ತಿದೆ. ಸದ್ಯ 10 ಲಕ್ಷ ರೂ. ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆಯೂ ಇದೆ. ಇದೀಗ ಪೂರೈಸುವತ್ತ ಗಮನ ಹರಿಸಲಾಗುತ್ತಿದೆ ಎಂದು ದಂಪತಿ ತಿಳಿಸಿದರು.
ಇದನ್ನೂ ಓದಿ: ಮಾಸ್ಕ್ ಧರಿಸಿದರೆ ಒಳ್ಳೆಯದು: ನಟ ಶಿವರಾಜ್ ಕುಮಾರ್