ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಬಸವೇಶ್ ಅವರನ್ನು ಭದ್ರಾವತಿ ಓಲ್ಡ್ ಟೌನ್ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯಲ್ಲಿ ಫೆಬ್ರವರಿ 28 ರ ರಾತ್ರಿ ನಡೆದ ಗಲಾಟೆ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಸವೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.28 ರಂದು ಭದ್ರಾವತಿಯಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್ ಅವರ ತಂಡ ರನ್ನರ್ ಅಪ್ ಆಗಿತ್ತು. ಈ ವೇಳೆ ರನ್ನರ್ ಅಪ್ ತಂಡದವರು ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದಕ್ಕೆ, ಶಾಸಕ ಸಂಗಮೇಶ್ ಅವರ ಪುತ್ರ ಸೇರಿದಂತೆ, ಸಂಗಮೇಶ್ ಸಹೋದರ ಬಿ.ಕೆ. ಮೋಹನ್ ಅವರ ಪುತ್ರ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಘೋಷಣೆ: 6 ಮಂದಿ ಕೈ ಕಾರ್ಯಕರ್ತರು ಅಮಾನತು
ಘಟನೆಯಲ್ಲಿ ಬಿಜೆಪಿಯ ಐದಾರು ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಸ್ಪತ್ರೆಗೆ ಬಂದು ಶಾಸಕರ ಕಡೆಯವರು ಗಲಾಟೆ ನಡೆಸಿದ್ದರು.
ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಸವೇಶ್ ನಾಲ್ಕನೇ ಆರೋಪಿಯಾಗಿದ್ದರು. ನಿನ್ನೆ ಮಧ್ಯರಾತ್ರಿ ಪೊಲೀಸರ ಬಲೆಗೆ ಬಿದ್ದ ಬಸವೇಶ್ನನ್ನು ಬಂಧಿಸಲಾಗಿದೆ. ಪೊಲೀಸರು ಇದುವರೆಗೂ 15 ಆರೋಪಿಗಳನ್ನು ಬಂಧಿಸಿದ್ದಾರೆ.