ಶಿವಮೊಗ್ಗ: ಉಕ್ಕಿನ ನಗರಿ ಭದ್ರಾವತಿ ಪಟ್ಟಣದ ಹಿಂದೂ ಮಹಾಸಭ ಸಮಿತಿ ಪ್ರತಿಷ್ಠಾಪಿಸಿದ್ದ ಗಣಪತಿಯ ನಿಮಜ್ಜನ ಅತ್ಯಂತ ಶಾಂತಿಯುತವಾಗಿ ಜರುಗಿದೆ. ನಿನ್ನೆ ಮಧ್ಯಾಹ್ನ ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯಿಂದ ಪ್ರಾರಂಭವಾದ ನಿಮಜ್ಜನ ಮೆರವಣಿಗೆಯು ರಂಗಪ್ಪ ವೃತ್ತದ ಮೂಲಕ ಭದ್ರಾ ನದಿ ಸೇತುವೆ, ಅಂಡರ್ ಬ್ರಿಡ್ಜ್ ವೃತ್ತ, ಹುತ್ತಾ ಕಾಲೋನಿಯ ತನಕ ಸಾಗಿದೆ. ಇಲ್ಲಿನ ಪ್ರಾರ್ಥನ ಮಂದಿರ ಮುಂದೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ನಗರಸಭೆ ಮುಂದೆ ಸಾಗಿದ ಗಣಪನನ್ನು, ಇಲ್ಲಿನ ಭದ್ರಾ ನದಿಯಲ್ಲಿ ನಿಮಜ್ಜನ ಮಾಡಲಾಯಿತು. ಗಣಪತಿ ಮೆರವಣಿಗೆ ಸಾಗುವ ಮಾರ್ಗವನ್ನು ಕೇಸರಿ ಮಯವಾಗಿಸಲಾಗಿತ್ತು.
ಮೆರವಣಿಗೆಯ ದಾರಿಯುದ್ದಕ್ಕೂ ವಿವಿಧ ಯುವಕರ ಸಂಘಗಳು ಅನ್ನ ಸಂತರ್ಪಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದರು. ಮೆರವಣಿಗೆಯಲ್ಲಿ ಯುವಕರು ಸೇರಿದಂತೆ ಮಹಿಳೆಯರು ಸಾವಿರಾರರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಮಹಿಳೆಯರು ಹಾಗೂ ಯುವತಿಯರು ನೃತ್ಯ ಮಾಡುತ್ತ ಸಾಗಿದ್ದು ವಿಶೇಷವಾಗಿತ್ತು.
ನೋಟಿನ ಹಾರ ಹಾಕಿದ ಭಕ್ತರು: ಮೆರವಣಿಗೆಯಲ್ಲಿ ಭಕ್ತರೂಬ್ಬರು ಗಣಪನಿಗೆ 20 ರೂಪಾಯಿಯ ಹಾರ ಹಾಕುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು. ಹಿಂದೂ ಮಹಾಸಭದ ವತಿಯಿಂದ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಎಸ್ಪಿ-1, ಡಿವೈಎಸ್ಪಿ-10, ಸಿಪಿಐ-20, ಪಿಎಸ್ಐ 60, ಎಎಸ್ಐ-100, ಹೆಡ್ ಕಾನ್ಸಟೇಬಲ್ ಹಾಗೂ ಪಿಸಿಗಳು-600, ಗೃಹ ರಕ್ಷಕ ದಳ-500, 6- ಡಿಎಆರ್ ತುಕಡಿ, 8 -ಕೆ ಎಸ್ ಆರ್ ಪಿ ತುಕಡಿ, 1 ಕ್ಯೂ ಆರ್ ಟಿ ತುಕಡಿ ಮತ್ತು 1 ಆರ್ ಎ ಎಫ್ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.
ಮೆರವಣಿಗೆಯು ಶಾಂತಿಯುತವಾಗಿ ಮುಕ್ತಾಯವಾಗಿದ್ದಕ್ಕೆ ಹಿಂದೂ ಮಹಾಸಭದ ಅಧ್ಯಕ್ಷ ಕದಿರೇಶ್ ಸಂತಸ ವ್ಯಕ್ತಪಡಿಸಿದ್ದು, ಮೆರವಣಿಗೆಯಲ್ಲಿ ಭಾಗಿಯಾದ ಯುವತಿಯರಿಗೆ, ಮಹಿಳೆಯರಿಗೆ, ಮೆರವಣಿಗೆಯಲ್ಲಿ ಸಾಗಿದವರಿಗೆ ಅನ್ನ ನೀರು ನೀಡಿದ ಸಂಘ, ಸಂಸ್ಥೆಗಳಿಗೆ ಹಾಗೂ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಕ್ಕಲಕೋಟ ಸಮರ್ಥ ಮಹಾರಾಜರ ಮಂದಿರ: ಮತ್ತೊಂದೆಡೆ ಬೆಳಗಾವಿಯಲ್ಲಿ ಈ ಬಾರಿಯ ಗಣೇಶೋತ್ಸವಕ್ಕೆ ಮಹಾರಾಷ್ಟ್ರದ ಅಕ್ಕಲಕೋಟ ಸ್ವಾಮಿ ಸಮರ್ಥ ಮಹಾರಾಜರ ಮಂದಿರದ ಪ್ರತಿರೂಪವನ್ನು ನಿರ್ಮಿಸಲಾಗಿದೆ. ಇಲ್ಲಿಯ ಸೋಮನಾಥ ನಗರದ ಜೈ ಕಿಸಾನ್ ಹೋಲ್ಸೇಲ್ ಬಾಜಿ ಮಾರ್ಕೆಟ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು 35ನೇ ವರ್ಷದ ಗಣೇಶೋತ್ಸವ ನಿಮಿತ್ತ ಇದನ್ನು ನಿರ್ಮಿಸಿದೆ.
ಇದನ್ನೂ ಓದಿ: ಮೊಬೈಲ್ ಬಿಡಿ, ಪುಸ್ತಕ ಹಿಡಿರಿ : ಬೆಳಗಾವಿ ಗಣಪನ ಶೈಕ್ಷಣಿಕ ಕಾಳಜಿ