ಶಿವಮೊಗ್ಗ: ಸಿಗಂದೂರು ದೇವಾಲಯದ ಧರ್ಮದರ್ಶಿ ಹಾಗೂ ಅರ್ಚಕರ ನಡುವಿನ ಗೊಂದಲವನ್ನು ಸಾಗರದ ಕೋರ್ಟ್ ಸಂಧಾನ ಸಭೆ ನಡೆಸಿ ಬಗೆಹರಿಸಿದ್ದರೂ ಸಹ ಸರ್ಕಾರ ಸಮಿತಿ ಮಾಡಿರುವುದು ಸರಿಯಲ್ಲ. ಸಿಗಂದೂರು ದೇವಸ್ಥಾನದ ವಿಚಾರಕ್ಕೆ ಕೈ ಹಾಕಿದರೆ ಯಡಿಯೂರಪ್ಪನವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಗಂದೂರು ದೇವಾಲಯ ಕಳೆದ ಒಂದುವರೆ ತಿಂಗಳು ಸಾಕಷ್ಟು ಚರ್ಚೆಯಲ್ಲಿದ್ದು, ಒಂದು ಖಾಸಗಿ ಟ್ರಸ್ಟ್ನ ಒಳಗೆ ರಾಜಕೀಯ ಉದ್ದೇಶದಿಂದ ಕೈ ಹಾಕುವ ಕೆಲಸ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಯಾವುದೇ ನೋಟಿಸ್ ನೀಡದೆ ಈಗ ಸಮಿತಿ ಮಾಡಿರುವುದು ಸರಿಯಲ್ಲ. ಜಿಲ್ಲೆಯ ಸಾಗರದ ಶಾಸಕರು, ಎಂಪಿ ಘಟನೆ ನಡೆದಾಗ ಎಲ್ಲಿ ಹೋಗಿದ್ರು..? ಜನಪ್ರತಿನಿಧಿಗಳಾದ ಇವರಿಗೆ ಒಂದು ಸಣ್ಣ ಘಟನೆ ನಡೆದಾಗ ಬಗೆಹರಿಸಲು ಸಾಧ್ಯವಿಲ್ವಾ..? ರಾಜ್ಯದ ಯಾವುದೇ ದೇವಸ್ಥಾನದಲ್ಲಿ ಗಲಾಟೆಗಳೇ ನಡೆದಿಲ್ವಾ...? ಗೋಕರ್ಣ, ಉಡುಪಿ ಮಠ ಸೇರಿದಂತೆ ಎಲ್ಲಾ ಕಡೆನೂ ಗಲಾಟೆಗಳಾಗಿದ್ದವು. ಆ ಸಮಯದಲ್ಲಿ ಎಲ್ಲಿ ಸಮಿತಿಗಳು ರಚನೆಯಾಗಿವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸಿಗಂದೂರು ವಿಚಾರದಲ್ಲಿ ಮಾತ್ರ ಜಾತಿಯ ವಿಚಾರ ಎಳೆದು ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯದಲ್ಲಿ ಗೊಂದಲವಿದ್ದರೆ ರಾಮಪ್ಪ ಹಾಗೂ ಶೇಷಗಿರಿ ಭಟ್ ಬಗೆಹರಿಸಿಕೊಳ್ಳುತ್ತಾರೆ. ಮಧ್ಯದಲ್ಲಿ ಮೂರನೇ ವ್ಯಕ್ತಿಯಾಗಿ ಡಿಸಿ ಹಾಗೂ ಸರ್ಕಾರ ತಲೆ ಹಾಕುವುದು ಸರಿಯಲ್ಲ. ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ಜಿಲ್ಲಾಧಿಕಾರಿಗಳು ವರ್ತನೆ ಮಾಡುತ್ತಿದ್ದಾರೆ. ಸಿಗಂದೂರು ದೇವಾಲಯದಲ್ಲಿ ಅರಣ್ಯ ಒತ್ತುವರಿ ಮಾಡಲಾಗಿದೆ ಎಂದು ಡಿಸಿ ಹೇಳುತ್ತಿದ್ದಾರೆ. ಸರಿಯಾಗಿ ದಾಖಲೆ ತೆಗೆದರೆ ಜಿಲ್ಲಾಧಿಕಾರಿಗಳ ಕಚೇರಿ ಕೂಡ ಅರಣ್ಯ ವ್ಯಾಪ್ತಿಯಲ್ಲೇ ಬರುತ್ತೆ ಎಂದು ಬೇಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈಡಿಗ ಸಮುದಾಯದ ಹೆಸರಿನಲ್ಲೇ ಕೋಟಾ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದಾರೆ. ರಾಜ್ಯದ ಮುಜರಾಯಿ ಖಾತೆ ಸಚಿವರಾದ್ರೂ ಈವರೆಗೆ ಒಂದು ಮಾತನಾಡಿಲ್ಲ. ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದು ಮುಜರಾಯಿ ಸಚಿವರು ಹೇಳಬಹುದಿತ್ತು ಎಂದ ಬೇಳೂರು, ಸಾಗರ ಶಾಸಕರು ಏನು ಸತ್ತೋಗಿದ್ದಾರಾ..? ಮಜಾ ಮಾಡೋಕೆ ಹೋಗಿದ್ದಾರಾ...? ಒಂದು ಸಣ್ಣ ಸಮಸ್ಯೆ ಬಗೆಹರಿಸಲು ಶಾಸಕರಾದವರಿಗೆ ಸಾಧ್ಯವಿಲ್ಲವೇ?.
ಇವರಿಗೆ ಪರ್ಸೆಂಟೇಜ್ ಕೊಟ್ಟಿಲ್ಲಾ ಅನ್ಸುತ್ತೆ, ಹಾಗೆಯೇ ಟ್ರಸ್ಟ್ ಕಮಿಟಿಗೆ ಸೇರಿಸಿಕೊಂಡಿಲ್ಲ ಅಂತಾ ರಾಜಕೀಯ ಮಾಡುತ್ತಿರಬೇಕು ಎಂದು ಹರತಾಳು ಹಾಲಪ್ಪ ವಿರುದ್ಧ ಗುಡುಗಿದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಹಿಂದೆ ದೇವಸ್ಥಾನ ವಿಷಯಕ್ಕೆ ಕೈ ಹಾಕಿ ಅಧಿಕಾರ ಕಳೆದುಕೊಂಡಿದ್ದಾರೆ. ಹಾಗೆಯೇ ಈ ಸಲವೂ ಸಿಗಂದೂರು ದೇವಸ್ಥಾನದ ವಿಷಯಕ್ಕೆ ಕೈ ಹಾಕಿದರೆ ಮತ್ತೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಶೀಘ್ರದಲ್ಲೇ ಸಿಗಂದೂರು ಉಳಿಸಲು ಹೋರಾಟ ಮಾಡಲು ಸಿದ್ಧತೆ ನಡೆಸಿದ್ದು, ಎಲ್ಲಾ ಸಮುದಾಯದವರು ಸೇರಿಸಿಕೊಂಡು ದೇವಸ್ಥಾನ ಉಳಿಸಲು ಬೃಹತ್ ಹೋರಾಟ ಮಾಡ್ತೀವಿ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.