ಶಿವಮೊಗ್ಗ: ಶುಕ್ರವಾರ ಸಾಗರದಲ್ಲಿ ಕಾರು ಚಾಲಕ ಹರ್ಷ ಹಾಗೂ ಆತನ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದಂಪತಿಗಳ ಆತ್ಮಹತ್ಯೆ ಹಿಂದೆ ಸಾಗರ ತಾಲೂಕು ಕಾರ್ಗಲ್ ಪಟ್ಟಣ ಪಂಚಾಯತ್ನ ಬಿಜೆಪಿ ಸದಸ್ಯರೊಬ್ಬರ ಕೈವಾಡ ಇದೆ ಎಂದು ಆರೋಪಿಸಿ, ಆತ್ಮಹತ್ಯೆ ಮಾಡಿಕೊಂಡ ಕಾರು ಚಾಲಕನ ಸಹೋದರಿ ಆಶಾರಾಣಿ ದೂರು ನೀಡಿದ್ದಾರೆ.
ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರ ಹರ್ಷ ಕುಮಾರ್ ಹಾಗೂ ಅತ್ತಿಗೆ ಸಾವಿಗೆ ವಾಟೆಮಕ್ಕಿ ನಾಗರಾಜ್ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸಾಗರ ತಾಲೂಕು ಬಿಜೆಪಿ ಕಚೇರಿಯಲ್ಲಿ ಸಹಾಯಕಿಯಾಗಿ ಅತ್ತಿಗೆ ಕೆಲಸ ಮಾಡುತ್ತಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಿಜೆಪಿಯ ವಾಟೆಮಕ್ಕಿ ನಾಗರಾಜ್ ಆಕೆಯ ಮನಸ್ಸು ಕೆಡಿಸಿ, ಆಕೆಯನ್ನು ಬಳಸಿ ಕೊಂಡಿದ್ದಾನೆ. ಈ ವಿಚಾರವಾಗಿ ಕಳೆದ ವರ್ಷ ಅವರು ಕಾಣೆಯಾಗಿದ್ದರು. ಈ ಕುರಿತು ನನ್ನ ಸಹೋದರ ದೂರು ಸಹ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
ವಾಟೆಮಕ್ಕಿ ನಾಗರಾಜ್ ಜೊತೆ ಕಾರು ಚಾಲಕನ ಪತ್ನಿ ಸಂಬಂಧ ಹೊಂದಿರುವ ವಿಚಾರವಾಗಿ ಮನೆಯಲ್ಲಿ ಜಗಳ ಸಹ ಆಗಿತ್ತು ಎನ್ನಲಾಗಿದ್ದು, ಕಾರು ಚಾಲಕ ವರ್ಷದ ಹಿಂದೆಯೇ ವಿಷ ಸೇವಿಸಿದ್ದ ಎಂದು ತಿಳಿದುಬಂದಿದೆ. ಈಗ ಇದೇ ವಿಚಾರವಾಗಿ ಮತ್ತೆ ದಂಪತಿಗಳು ಜಗಳವಾಡಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಣ್ಣ ಹಾಗೂ ಅತ್ತಿಗೆ ಸಾವಿಗೆ ಕಾರ್ಗಲ್ ಪಟ್ಟಣ ಪಂಚಾಯತ್ ಸದಸ್ಯ ವಾಟೆಮಕ್ಕಿ ನಾಗರಾಜ್ ಕಾರಣರಾಗಿದ್ದಾರೆ. ಅಲ್ಲದೆ ಇದರ ಹಿಂದೆ ಕಾಣದ ಕೈಗಳು ಸಹ ಇದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಪೊಲೀಸರು ತಕ್ಷಣ ಆರೋಪಿಯನ್ನು ಬಂಧಿಸಿ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇವರ ಜೊತೆಗೆ ಸಾಗರದ ಕಾರು ಚಾಲಕರ ಸಂಘ ಸಹ ಪೊಲೀಸರಿಗೆ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಮನವಿ ಸಲ್ಲಿಸಿದ್ದಾರೆ. ಪೊಲೀಸರು ಎಫ್ಐಆರ್ ಮಾಡುವವರೆಗೂ ಶವದ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡರು, ನಂತರ ಶವವನ್ನು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಯಿತು.