ಶಿವಮೊಗ್ಗ: ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಬಿಡಿಎ ಆಯುಕ್ತ, ಐಎಎಸ್ ಅಧಿಕಾರಿ ಹೆಚ್.ಆರ್.ಮಹಾದೇವಯ್ಯ ಶೂ ಧರಿಸಿಕೊಂಡು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದು, ಅಂಬೇಡ್ಕರ್ ಅವರ ಅಭಿಮಾನಿಗಳ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಹಾಗಾಗಿ ಕೂಡಲೇ ಡಾ. ಹೆಚ್.ಆರ್.ಮಹಾದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಶೂ ಧರಿಸಿಯೇ ಪೂಜೆ ಸಲ್ಲಿಸುವ ಮೂಲಕ ಅಗೌರವ ತೋರಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಈ ಅಧಿಕಾರಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗಿದ್ದರು. ಆ ಸಂದರ್ಭದಲ್ಲಿ ಸಿಎಂ ಕಚೇರಿಯಿಂದ ಅಂಬೇಡ್ಕರ್ ಫೋಟೋ ತೆಗೆಸಿದ್ದರು. ಆಗಲೂ ಸಹ ದಲಿತಪರ ಸಂಘಟನೆಗಳು ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಇದೀಗ ಬಿಡಿಎ ಆಯುಕ್ತರಾಗಿರುವ ಮಹಾದೇವ್, ಅಂಬೇಡ್ಕರ್ ವಿರೋಧಿ ನಿಲುವನ್ನು ಮುಂದುವರೆಸಿದ್ದಾರೆ. ಕೂಡಲೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಅಧಿಕಾರಿ ಹಿಂದುಳಿದ ಮತ್ತು ದಲಿತ ಅಧಿಕಾರಿಗಳನ್ನು ತುಳಿಯುತ್ತಿದ್ದಾರೆ ಎಂಬ ಆರೋಪ ಬಿಡಿಎ ವಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.