ಶಿವಮೊಗ್ಗ : ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ಬಂಜಾರ ಸಂಘಟನೆ ಮತ್ತು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ಗಿರೀಶ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾ ಉಪಚುನಾವಣೆಯ ಮಾದಿಗ ಸಮುದಾಯದ ಸಭೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದೇ ತರುತ್ತೇವೆ ಎನ್ನುವ ಮೂಲಕ ಆಮಿಷ ಒಡ್ಡಿದ್ದಾರೆ. ಆ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇವರ ಹೇಳಿಕೆಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಎಂದರು.
ನ್ಯಾ.ಸದಾಶಿವ ವರದಿಗೆ ಸಂಬಂಧಿಸಿದಂತೆ ಇನ್ನೂ ವಾದ ವಿವಾದಗಳು ನಡೆಯುತ್ತಿವೆ. ಬಹಿರಂಗ ಚರ್ಚೆಯಾಗಿಲ್ಲ ಮತ್ತು ಕಟೀಲ್ ಅವರಿಗೆ ಇದರ ಬಗ್ಗೆ ಯಾವ ತಿಳಿವಳಿಕೆಯೂ ಇಲ್ಲ. ಹೀಗಿದ್ದು, ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ, ಇದು ಬೆಂಕಿ ಹಚ್ಚುವ ಕೆಲಸವೇ ಆಗಿದೆ. ಅಭಿವೃದ್ಧಿ ಹಿನ್ನೆಲೆಯಲ್ಲಿ ಮತ ಕೇಳಬೇಕೆ ಹೊರತು ಮೀಸಲಾತಿಯ ವಿಷಯದ ಮೇಲೆ ಮತ ಕೇಳುವುದು ಸರಿಯಲ್ಲ ಎಂದರು.
ಕಟೀಲ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಮತ್ತು ಬಹಿರಂಗ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಬಹಿಷ್ಕರಿಸಿ ಎನ್ನುವ ಆಂದೋಲನವನ್ನು ಸಂಘಟನೆ ಹಮ್ಮಿಕೊಳ್ಳಲಿದೆ ಎಂದರು. ಸೋಮವಾರದ ಒಳಗೆ ಹೇಳಿಕೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.