ಶಿವಮೊಗ್ಗ: ''ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಬಡವರ ಚಿಂತನೆಗಳು ಇಂದಿಗೂ ಜೀವಂತವಾಗಿದೆ'' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಸೊರಬ ಪಟ್ಟಣದ ಬಂಗಾರ ಧಾಮದಲ್ಲಿ ಎಸ್. ಬಂಗಾರಪ್ಪ ಫೌಂಡೇಶನ್ ಹಾಗೂ ಎಸ್. ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 12ನೇ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ''ಎಸ್. ಬಂಗಾರಪ್ಪ ಸವಿ ನೆನಪು'' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
''ಎಸ್. ಬಂಗಾರಪ್ಪ ಅವರ ಒಡನಾಟ ಮರೆಯುವಂತದ್ದಲ್ಲ. ಅಂದು, ಇಂದಿನ ರಾಜಕಾರಣದ ಮಧ್ಯೆ ಅಂತರ ಹೆಚ್ಚಿದೆ. ಅಂದಿನ ಬದ್ಧತೆ ಇಂದು ರಾಜಕಾರಣದಲ್ಲಿ ಉಳಿಯದೇ ಕಲುಷಿತ ಗೊಂಡಿದೆ. ನಮಗೆ ದಾರಿ ತೋರಿಸಿದ ಕೆಲವರಲ್ಲಿ ಬಂಗಾರಪ್ಪ ಅವರು ಕೂಡ ಒಬ್ಬರಾಗಿದ್ದಾರೆ'' ಎಂದರು. ರೈತರ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಿ ರೈತ ವರ್ಗದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಯಾವುದೇ ವ್ಯಕ್ತಿಯ ಹೆಜ್ಜೆ ಗುರುತುಗಳು ತುಂಬಾ ಮುಖ್ಯವಾಗಿದ್ದು, ಮರಣದ ನಂತರವೂ ಜನಮಾನಸದಲ್ಲಿ ಬದುಕುವುದು ಅಷ್ಟು ಸುಲಭವಲ್ಲ. ಆದರೆ, ಬಂಗಾರಪ್ಪ ಅವರು ಇಂದಿಗೂ ಜನಮಾನಸದಲ್ಲಿ ಉಳಿದ್ದಾರೆ'' ಎಂದು ತಿಳಿಸಿದರು.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ''ಎಸ್. ಬಂಗಾರಪ್ಪ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರಿಗೆ ರಾಜಕೀಯ ಅಧಿಕಾರ ಸಿಕ್ಕಿದ್ದು, ಅವರೊಬ್ಬ ಸಮಾಜವಾದಿ ಎಂಬುದಕ್ಕೆ. ಗೇಣಿದಾರರ ಹೋರಾಟಕ್ಕೆ ಸ್ಪಂದನೆ ನೀಡಿದ ಬಂಗಾರಪ್ಪ ಅವರು ಎತ್ತರಕ್ಕೆ ಬೆಳೆದಿದ್ದರು. ಬಡವರನ್ನು ಮುನ್ನೆಲೆಯಲ್ಲಿ ಇಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನಮಾನಸದಲ್ಲಿ ನೆಲೆಸಿದ್ದಾರೆ'' ಎಂದು ಹೇಳಿದರು.
''ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಮಾತನಾಡಿ, ''ನನ್ನ ತಂದೆ, ತಾಯಿ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ನಾನು ಧನ್ಯನಾಗಿದ್ದೇನೆ. ಎಸ್. ಬಂಗಾರಪ್ಪ ಅವರ ಸಮಾಧಿ ಸ್ಥಳ ಜನರಿಗೆ ಮುಕ್ತವಾಗಿರುತ್ತದೆ. ಉಚಿತವಾಗಿ ಎಲ್ಲರೂ ಬಳಸಿಕೊಳ್ಳಬಹುದು. ನಾನು ರಾಜ್ಯಾದ್ಯಂತ ಚಲಿಸಿದಾಗ ನಾಡಿನ ಜನಮಾನಸದಲ್ಲಿ ತಂದೆ ಬಂಗಾರಪ್ಪ ಅವರು ನೆಲೆಸಿದ್ದನ್ನ ಕಂಡು ಹೃದಯ ತುಂಬಿ ಬಂದಿದೆ. ಅವರ ಹೆಸರನ್ನು ಉಳಿಸಿಕೊಂಡು ಹೋಗುವ ಕೆಲಸ ನಿರಂತರ ಮಾಡುತ್ತೇನೆ'' ಎಂದು ತಿಳಿಸಿದರು.
ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್, ಆರ್. ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಎಂ.ಆರ್. ಮಂಜುನಾಥ್ ಗೌಡ, ಎಸ್. ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ಎಸ್. ವೇಣುಗೋಪಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಜನವರಿ 14 ರಿಂದ ಮಣಿಪುರದಿಂದ ಮುಂಬೈಗೆ 'ಭಾರತ್ ನ್ಯಾಯ ಯಾತ್ರೆ': ಕಾಂಗ್ರೆಸ್ ಘೋಷಣೆ