ಶಿವಮೊಗ್ಗ: ಧಾರ್ಮಿಕ ಕ್ಷೇತ್ರಗಳಗಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಕ್ಷೇತ್ರಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುವುದರಿಂದ ಸ್ವಚ್ಛತೆಗೆ ಆದ್ಯತೆ ಇರುವುದಿಲ್ಲ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಹಣಗೆರೆ ಎಂಬ ಸರ್ವಧರ್ಮ ಸಮನ್ವಯತೆಯ ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಛತೆ ಎಂಬುದು ಮರಿಚೀಕೆಯಾಗಿತ್ತು. ಹಣಗೆರೆ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಶುಚಿತ್ವವನ್ನು ತರುವ ಉದ್ದೇಶದಿಂದ ಹಣಗೆರೆ ಗ್ರಾಮ ಪಂಚಾಯತ್ ಮಂಗಳೂರು ಮೂಲದ ಯುವಕರ ಟ್ರಸ್ಟ್ಗೆ ಕಸ ಸಂಗ್ರಹ ಹಾಗೂ ತ್ಯಾಜ್ಯ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡಿದೆ.
ಜಿಲ್ಲಾಧಿಕಾರಿ ಕೆ ಎ ದಯಾನಂದ್ರವರು ಹಣಗೆರೆಗೆ ಭೇಟಿ ಕೊಟ್ಟಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದ್ದರು. ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯತ್ ಮಂಗಳೂರಿನ ನಿಟ್ಟೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದಾಗ ತಮ್ಮ ಗ್ರಾಮ ಪಂಚಾಯತ್ನಲ್ಲೂ ಸಹ ಕಸ ಸಂಗ್ರಹ ನಡೆಸಬೇಕು ಎಂದಾಗ ಇವರಿಗೆ ಬನಶಂಕರಿ ಮಂಗಳೂರು ಟ್ರಸ್ಟ್ ಪರಿಚಯವಾಗಿದೆ. ಹಣಗೆರೆ ಕ್ಷೇತ್ರ ಅರಣ್ಯ ಪ್ರದೇಶದಲ್ಲಿ ಇರುವ ಧಾರ್ಮಿಕ ಕೇಂದ್ರವಾಗಿದೆ. ಹಣಗೆರೆಗೆ ಸರ್ವಧರ್ಮಿಯರು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಸಾದವನ್ನುೂ ಸೇವಿಸಲು ದೇವಾಲಯದ ಪಕ್ಕದ ಪ್ರದೇಶಕ್ಕೆ ಹೋಗುತ್ತಾರೆ. ಇಲ್ಲಿ ಸಾಕಷ್ಟು ಗಲೀಜು ಮಾಡುತ್ತಾರೆ. ತಮ್ಮ ಎಲ್ಲಾ ತ್ಯಾಜ್ಯವನ್ನೂ ಅಲ್ಲೆ ಬಿಟ್ಟು ಹೋಗುತ್ತಾರೆ. ಇದರಿಂದ ಹಣಗೆರೆ ಗ್ರಾಮ ಪಂಚಾಯತ್ ಮಂಗಳೂರು ಮೂಲದ ಬನಶಂಕರಿ ಮಂಗಳೂರು ಟ್ರಸ್ಟ್ಗೆ ಹಣಗೆರೆ ಸ್ವಚ್ಛತೆಯ ಜವಾಬ್ದಾರಿ ವಹಿಸಿದೆ. ಬನಶಂಕರಿ ಮಂಗಳೂರು ಟ್ರಸ್ಟ್‌ನ ಯುವಕರೇ ಸೇರಿ ರಚನೆ ಮಾಡಿದ ಟ್ರಸ್ಟ್ ಆಗಿದೆ. ಯುವಕರು ಹಣಗೆರೆಯ ಮನೆ, ಅಂಗಡಿ ಹಾಗೂ ಹೋಟೆಲ್ಗಳಿಂದ ಸಂಗ್ರಹವಾಗುವ ಕಸವನ್ನು, ಸಂಗ್ರಹ ಮಾಡಲು ಹಣ ನಿಗದಿ ಮಾಡಿ ಕೊಂಡಿದ್ದಾರೆ. ಹಣಗೆರೆ ದೇವಾಲಯಕ್ಕೆ ಬರುವ ಭಕ್ತರು ದೇವಾಲಯದ ಪ್ರದೇಶವನ್ನು ಬಳಸಿದರೆ ಅವರಿಂದ ಅಲ್ಪ ಮೊತ್ತದ ಹಣ ಸಂಗ್ರಹಕ್ಕೆ ನಿರ್ಧಾರ ಮಾಡಿದೆ. ಈಗಾಗಲೇ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳ ಶೇ. 80ರಷ್ಟನ್ನು ಸ್ವಚ್ಛ ಮಾಡಲಾಗಿದೆ. ಇದೇ ರೀತಿ ಮುಂದೆಯೂ ಸಹ ಸ್ವಚ್ಛ ಹಣಗೆರೆ ಮಾಡಲು ಟ್ರಸ್ಟ್ ಸಂಕಲ್ಪ ತೊಟ್ಟಿದೆ.
ಟ್ರಸ್ಟ್ ವತಿಯಿಂದ 6 ಜನ ಕಸ ಸಂಗ್ರಹಗಾರರು, ಓರ್ವ ಟ್ರಾಕ್ಟರ್ ಚಾಲಕ, ಸೇರಿ ಒಟ್ಟು 10 ಜನ ಕೆಲಸಗಾರರು ಇದ್ದಾರೆ. ಇವರಿಗೆ ಪ್ರತಿದಿನ 6 ರಿಂದ 7 ಸಾವಿರ ರೂ. ಖರ್ಚು ಬರುತ್ತದೆ. ಇದರಿಂದ ಸದ್ಯದ ಮಟ್ಟಿಗೆ ಟ್ರಸ್ಟ್‌ನವರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಆದರೂ ಸಹ ಟ್ರಸ್ಟ್‌ನ ಯುವಕರು ಕಸ ಸಂಗ್ರಹ ಶುಚಿತ್ವ ಕಾಪಾಡಲು ಪಣತೊಟ್ಟಿದ್ದಾರೆ. ಇವರಿಗೆ ಗ್ರಾಮ ಪಂಚಾಯತ್, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು ಬೆಂಬಲ ನೀಡಿದ್ದಾರೆ. ಹಣಗೆರೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅಲ್ಲಲ್ಲಿ ಟ್ರಸ್ಟ್ ಅರಿವು ಫಲಕಗಳನ್ನು ಹಾಕಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಅರಿವು ಮೂಡಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಟ್ರಸ್ಟ್ ಹಣಗೆರೆಯ ಅಂಗಡಿ, ಹೋಟೆಲ್ ಹಾಗೂ ಇತರೆ ಕಡೆ ಸಂಗ್ರಹಿಸಿದ ಕಸವನ್ನು ಪಂಚಾಯತ್ನ ಗೋಮಾಳ ಜಾಗದಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಹಿಂದೆ ಹಣಗೆರೆಯಲ್ಲಿ ಕಾಲಿಡಲು ಅಸಹ್ಯ ಮಾಡುತ್ತಿದ್ದವರು, ಈಗ ಸಂತೊಷದಿಂದ ಬರುವಂತಾಗಿದೆ.