ಶಿವಮೊಗ್ಗ: ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಅಳವಡಿಕೆ ಮಾಡಿರುವುದನ್ನು ಖಂಡಿಸಿ ಪಾಲಿಕೆ ಮುಂಭಾಗದಲ್ಲಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಂಗಳವಾರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮೇಹಕ್ ಶರೀಫ್ ರವರು ಅಧಿಕಾರ ಸ್ವೀಕರಿಸಿದ್ದರು. ಈ ವೇಳೆ ಅವರಿಗೆ ಟಿಪ್ಪು ಸುಲ್ತಾನ್ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈ ಫೋಟೊವನ್ನು ಕಚೇರಿಯಲ್ಲಿ ಹಾಕಲಾಗಿತ್ತು. ಈ ಹಿನ್ನೆಲೆ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಹಾಕಿರುವುದನ್ನು ಖಂಡಿಸಿ, ಟಿಪ್ಪು ಭಾವಚಿತ್ರ ತೆರವುಗೊಳಿಸಲು ಬಜರಂಗದಳದ ಕಾರ್ಯಕರ್ತರು ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.
ಟಿಪ್ಪು ಓರ್ವ ಮತಾಂಧ, ಹಿಂದುಗಳನ್ನು ಮತಾಂತರ ಮಾಡಿದ್ದಲ್ಲದೆ ಹಿಂದುಗಳ ಹತ್ಯೆ ನಡೆಸಿದ್ದಾನೆ. ಅಲ್ಲದೆ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ರದ್ದು ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ನಾಡದ್ರೋಹಿ ಟಿಪ್ಪುವಿನ ಭಾವಚಿತ್ರವನ್ನು ಹಾಕಿರುವುದು ಖಂಡನೀಯ. ಮತಾಂಧ ಟಿಪ್ಪುವಿನ ಭಾವಚಿತ್ರ ಹಾಕಬಾರದು ಎಂದು ಬಜರಂಗ ದಳದ ಕಾರ್ಯಕರ್ತರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಟಿಪ್ಪು ಭಾವಚಿತ್ರ ತೆರವು : ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮುನ್ನವೇ ಪಾಲಿಕೆಯಲ್ಲಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ತೆರವು ಮಾಡಲಾಗಿದೆ. ಸ್ಥಾಯಿ ಸಮಿತಿ ಕಚೇರಿಯಲ್ಲಿ ಟಿಪ್ಪುವಿನ ಭಾವಚಿತ್ರವನ್ನು ಉಡುಗೊರೆ ನೀಡಿದ್ದು ನಿಜ. ಆದರೆ ಅಂದು ಸಂಜೆಯೇ ಟಿಪ್ಪುವಿನ ಭಾವಚಿತ್ರವನ್ನು ಅವರೇ ತೆರವು ಮಾಡಿದ್ದಾರೆ. ಈಗ ಟಿಪ್ಫು ಭಾವಚಿತ್ರ ತೆಗೆಯಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಗಾಂಧೀಜಿ, ಅಂಬೇಡ್ಕರ್ ಹಾಗೂ ಬಸವಣ್ಣನ ಭಾವಚಿತ್ರವನ್ನು ಹಾಕಲು ಮಾತ್ರ ಅನುಮತಿ ಇದೆ ಎಂದು ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಅವರು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ : ನಮ್ಮ ದೇಶದ ಆಂತರಿಕ ವಿಚಾರ ಬರೆಯಲು ಬಿಬಿಸಿ ಯಾರು?: ಸಚಿವ ಅಶ್ವತ್ಥ ನಾರಾಯಣ್ ಪ್ರಶ್ನೆ