ಶಿವಮೊಗ್ಗ: ಇಲ್ಲಿನ ಸಾಗರದ ತಲವಾಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಡುವಾಣಿ ಗ್ರಾಮದ ಕಸ ವಿಲೇವಾರಿ ಘಟಕದ ಸರಿಯಾದ ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿದೆ. ಜೋಗ- ಕಾರ್ಗಲ್ ಪಟ್ಟಣ ಪಂಚಾಯತ್ನ ಸಂಪೂರ್ಣ ಕಸವನ್ನು ಇಲ್ಲೇ ತಂದು ಹಾಕಲಾಗುತ್ತಿದೆ. ಇದರಿಂದ ಇಡುವಾಣಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಐದಾರು ಗ್ರಾಮ ದುರ್ವಾಸನೆಯಲ್ಲಿ ಬದುಕುವ ಸಂಕಷ್ಟ ಬಂದೊದಗಿದೆ.
ನಿತ್ಯ ಟನ್ಗಟ್ಟಲೆ ಕಸ ತಂದು ಹಾಕಲಾಗುತ್ತಿದೆ. ಆದರೆ, ಸರಿಯಾದ ನಿರ್ವಹಣೆ ಮಾತ್ರ ಮಾಡುತ್ತಿಲ್ಲ. ಇದರಿಂದ ನಿತ್ಯ ಸ್ಥಳೀಯರು ನರಕಯಾತನೆ ಅನುಭವಿಸುವಂತಾಗಿದೆ. ಅಲ್ಲದೇ ನೊಣ- ನಾಯಿಗಳ ಕಾಟ ವಿಪರೀತವಾಗಿದೆ. ಕಸ ವಿಲೇವಾರಿ ಘಟಕದ ಯಂತ್ರ ಸರಿಯಾದ ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ. ಇದರಿಂದ ಕಸ ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದರಿಂದಾಗಿ ಈ ಭಾಗದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಇದಕ್ಕೂ ಮೊದಲು ಹತ್ತಾರು ಬಾರಿ ಕಸ ಸಂಸ್ಕರಣ ಘಟಕ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಜೋಗ- ಕಾರ್ಗಲ್ ಪಟ್ಟಣ ಪಂಚಾಯತ್ ಅಧ್ಯಕ್ಷರು, ಆಡಳಿತಾಧಿಕಾರಿಗಳಿಗೆ, ಸಾಗರ ಶಾಸಕ ಹಾಲಪ್ಪಗೆ ಮನವಿ- ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಸ ಸಂಸ್ಕರಣ ಘಟಕ ಸರಿಯಾಗಿ ನಿರ್ವಹಣೆ ಮಾಡಿ, ಇಲ್ಲವೇ ಘಟಕವನ್ನೇ ಬೇರೆ ಕಡೆ ವರ್ಗಾಯಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಓದಿ: ಮನೆದೇವರ ಜಾತ್ರೆಗೆ ಹೊರಟವರ ಕ್ರೂಸರ್ಗೆ ಬಸ್ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ