ಶಿವಮೊಗ್ಗ: ದುರುದ್ದೇಶ ಹಾಗೂ ರಾಜಕೀಯಪ್ರೇರಿತವಾಗಿ ಅಗ್ನಿಪಥ್ ಯೋಜನೆಯ ವಿರುದ್ದ ಹೋರಾಟ ನಡೆಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿದರು. ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಅಗ್ನಿಪಥ್ ವಿರುದ್ದದ ಹೋರಾಟ ಸರಿಯಲ್ಲ. ಇದನ್ನು ಎರಡೇ ದಿನದಲ್ಲಿ ತಡೆಯುವ ಪ್ರಯತ್ನ ಮಾಡಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೆಲಸವಿದೆ ಎಂದರು.
ಈ ಯೋಜನೆಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ದೇಶಸೇವೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಅವರಿಗೆ ಒಳ್ಳೆಯ ಸಂಬಳವನ್ನೂ ಸಹ ನೀಡಲಾಗುತ್ತದೆ. ಸೇವೆ ಮುಗಿಸಿ ಬಂದ ಮೇಲೆ ಅವರ ಕೈಗೆ ಒಂದು ಹಿಡಿಗಂಟು ಕೊಡಲಾಗುತ್ತದೆ ಎಂದು ಹೇಳಿದರು.
ದೇಶ ಭಕ್ತರು ಯಾರೂ ಸಹ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಲ್ಲ. ಇದೆಲ್ಲ ರಾಜಕೀಯ ಪ್ರೇರಿತ. ಯೋಜನೆಗೆ ಆಸಕ್ತಿ ಇರುವವರು ಮಾತ್ರ ಭಾಗವಹಿಸುವ ಅವಕಾಶವಿದೆ. ಈ ಯೋಜನೆಯಲ್ಲಿ ಓದಲು ಸಹ ಅವಕಾಶ ಮಾಡಿಕೊಡಲಾಗುತ್ತದೆ. ಇದೊಂದು ಅತ್ಯುತ್ತಮವಾದ ಯೋಜನೆ. ಆದರೆ, ಮೋದಿ ಹಾಗೂ ಬಿಜೆಪಿ ಸರ್ಕಾರಕ್ಕೆ ಕ್ರೆಡಿಟ್ ಸಿಗಬಾರದು ಎಂಬ ಹುನ್ನಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಗ್ನಿಪಥ್ ವಿರೋಧಿಸಿ ರಾಜಭವನ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ