ಶಿವಮೊಗ್ಗ: ತಾವೇ ಸ್ವತಃ ಗೆಲ್ಲೋಕೆ ತಿಣುಕಾಡಿದ ಅರವಿಂದ್ ಬೆಲ್ಲದ್ ಮುಖ್ಯಮಂತ್ರಿ ಆಗುವ ಕನಸು ಕಾಣ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಲೇವಡಿ ಮಾಡಿದರು.
ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬರುತ್ತಿರುವುದರಲ್ಲಿ ಏನು ವಿಶೇಷತೆ ಇಲ್ಲ. ಅವರು ರುಟೀನ್ ಆಗಿ ಮೂರು ತಿಂಗಳಿಗೊಮ್ಮೆ ಬರುತ್ತಾರೆ. ಯಾರೋ ಅರವಿಂದ್ ಬೆಲ್ಲದ್ ಅಂತವರು ತಾವೇ ಸ್ವತಃ ಗೆಲ್ಲೋಕೆ ತಿಣಕಾಡೋ ಮನುಷ್ಯ ಮುಖ್ಯಮಂತ್ರಿ ಆಗೋ ಕನಸು ಕಾಣ್ತಿದ್ದಾರೆ. ಕನಸು ಕಾಣಲು ಯಾರು ಬೇಡ ಎಂದಿದ್ದಾರೆ. ಇಂತವರು ನಾಯಕತ್ವದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸದ್ಯದಲ್ಲಿ ಯಾವುದೇ ನಾಯಕತ್ವದ ಗೊಂದಲ ಇಲ್ಲ ಎಂದರು.
ಪದೇ ಪದೇ ನಾಯಕತ್ವ ಬದಲಾವಣೆ ಆಗುತ್ತೆ ಎನ್ನುವ ವಿಷಯದಿಂದಲೇ ಆ ವಿಷಯವನ್ನು ಜೀವಂತ ಇಡುವ ರಾಜಕೀಯ ತಂತ್ರಗಾರಿಕೆ ಕೂಡ ನಡೆಯುತ್ತಿದೆ. ವಾಸ್ತವದಲ್ಲಿ ಅದಕ್ಕೆ ತಿರುಳಿಲ್ಲ ಎಂದರು. ಅರುಣ್ ಸಿಂಗ್ ಅವರು ಬಂದಾಗ ಗೊಂದಲ ಇದೆಯಾ ಎಂಬುದರ ಬಗ್ಗೆ ಎಲ್ಲರ ಅಭಿಪ್ರಾಯ ಏನು ಎಂದು ಕೇಳೊದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯೇ ಹೊರತು ಏನೂ ವಿಶೇಷ ಇಲ್ಲ. ಇದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಈಶ್ವರಪ್ಪನವರ ಬಳಿ ಇರಬಹುದು ಎಂದು ಹೇಳಿದರು.
ಕೆಲವು ಸಂದರ್ಭದಲ್ಲಿ ಮದುವೆ ವಾದ್ಯ ಕೇಳಿದ ತಕ್ಷಣ ಎಲ್ಲರೂ ಮದುಮಗ ಆಗಬೇಕು ಅನಿಸುತ್ತೆ. ಆದ್ರೆ ಹೆಣ್ಣು ಕೊಡೊವ್ರು ಬೇಕಲ್ಲ ಎಂದು ಮುಖ್ಯಮಂತ್ರಿ ಆಗೋ ಕನಸು ಕಾಣುತ್ತಿರುವವರಿಗೆ ಪರೋಕ್ಷವಾಗಿ ಆಯನೂರು ಮಂಜುನಾಥ್ ಟಾಂಗ್ ನೀಡಿದರು.
ಅಸಂಘಟಿತ ಕಾರ್ಮಿಕರಿಗೂ ಪ್ಯಾಕೇಜ್ ಘೋಷಿಸಿ:
ಇನ್ನು ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಹಣವನ್ನು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರೂ ಆಗಿರುವ ಆಯನೂರು ಮಂಜುನಾಥ್ ಆಗ್ರಹಿಸಿದರು. ಈ ಪ್ಯಾಕೇಜ್ ಹಣವನ್ನು ಅರ್ಹರಿಗೆ ತಲುಪಿಸುವ ನಡುವೆ ಕೆಲವು ಮಧ್ಯವರ್ತಿಗಳು 300 ರಿಂದ 350 ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಇದನ್ನು ತಾವು ತೀವ್ರವಾಗಿ ಖಂಡಿಸುವುದಲ್ಲದೆ ಈ ಮಧ್ಯವರ್ತಿಗಳನ್ನು ದೂರವಿಟ್ಟು ಅರ್ಹ ಫಲಾನುಭವಿಗಳಿಗೆ ನೇರವಾಗಿ ಘೋಷಿತ ಮೊತ್ತ ತಲುಪಬೇಕೆಂದು ತಾವು ಆಗ್ರಹಿಸುವುದಾಗಿ ತಿಳಿಸಿದರು.
ಮಧ್ಯವರ್ತಿಗಳ ಬಗ್ಗೆ ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಅಸಂಘಟಿತ ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ದುರುಪಯೋಗವಾಗದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಮತ್ತು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಪ್ರಾಮಾಣಿಕವಾಗಿ ತಲುಪಬೇಕು ಈ ನಿಟ್ಟಿನತ್ತ ಸಂಘ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಹಾಡಹಗಲೇ ಕಾಡಂಚಿನಲ್ಲಿ ಕುಡುಕರ ದರ್ಬಾರ್!
ಅಸಂಘಟಿತ ಕಾರ್ಮಿಕರೆಲ್ಲರೂ ಸಂಘಟಿತರಾಗಬೇಕಾದ ಅಗತ್ಯವಿದೆ. ಅನೇಕ ಅಸಂಘಟಿತ ಕಾರ್ಮಿಕರು ಇಂದು ಯಾವುದೇ ಸೌಲಭ್ಯಗಳು ಇಲ್ಲದೆ ವಂಚಿತರಾಗುತ್ತಿದ್ದಾರೆ. ಉದಾಹರಣೆಗೆ ಅಡುಗೆ ಕೆಲಸ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೆ ಮುಜರಾಯಿ ದೇವಸ್ಥಾನದಲ್ಲಿ ಅಡುಗೆ ಮಾಡುವರರಿಗೆ ಮಾತ್ರ ಸರ್ಕಾರ ಪರಿಹಾರ ಘೋಷಿಸಿದೆ. ಉಳಿದ ಸಾವಿರಾರು ಅಡುಗೆ ಮಾಡುವವರು ಎಲ್ಲಿಗೆ ಹೋಗಬೇಕು. ಹಾಗೆಯೇ ಟೈಲರಿಂಗ್ ಮಾಡುವವರು, ಕ್ಷೌರಿಕರು, ಹೋಟೆಲ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬೀಡಿ ಕಟ್ಟುವವರು ಹೀಗೆ ಲಕ್ಷಾಂತರ ಜನರು ಇನ್ನು ಸಂಘಟಿತರೂ ಆಗಿಲ್ಲ ಅಸಂಘಟಿತರೂ ಆಗಿಲ್ಲ. ಇಂತಹವರಿಗೆ ಸರ್ಕಾರದ ಪರಿಹಾರಗಳು ಸಿಗುವುದಾದರೂ ಹೇಗೆ ಹಾಗಾಗಿ ಮೊದಲು ಇವರನ್ನೆಲ್ಲಾ ಒಂದೇ ಸೂರಿನಡಿ ತರಬೇಕಾಗಿದೆ ಎಂದರು.
ಇದುವರೆಗೂ ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ಉದ್ಯೋಗವನ್ನು ನೋಂದಾಯಿಸದೆ ಇರುವ ಅಸಂಘಟಿತ ಕಾರ್ಮಿಕರು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾ.ಪಂ. ನಗರ ಪ್ರದೇಶಗಳಲ್ಲಿ, ನಗರ ಸಭೆ ಅಥವಾ ಪಾಲಿಕೆ ಅಥವಾ ಪಟ್ಟಣ ಪಂಚಾಯಿತಿಗಳಲ್ಲಿ ನಿಯೋಜಿತ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದು ಬ್ಯಾಂಕ್ ಪಾಸ್‌ಪುಸ್ತಕ ಜೆರಾಕ್ಸ್ ಪ್ರತಿ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಫೋಟೋದೊಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಇದು ಕೇವಲ ಪರಿಹಾರ ಪಡೆಯಲು ಅಷ್ಟೆ ಅಲ್ಲದೆ ಉಚಿತ ಲಸಿಕೆ ಹಾಕಿಸಿಕೊಳ್ಳಲು ಕೂಡ ನೆರವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕುಪೇಂದ್ರ ಆಯನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಘಾಮೋಹನ ಜೆಟ್ಟಿ, ಉಪಾಧ್ಯಕ್ಷೆ ಗೌರಿ ಶ್ರೀನಾಥ್, ಪದಾಧಿಕಾರಿಗಳಾದ ಸುರೇಖಾ ಪಾಲಾಕ್ಷಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ: ತೋಟದ ಮನೆಯಲ್ಲೇ ಲಸಿಕೆ ಕೇಂದ್ರ ಸ್ಥಾಪಿಸಿ 50 ಮಂದಿಗೆ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ