ಶಿವಮೊಗ್ಗ: ಗಟ್ಟಿ ನಿಲುವಿನೊಂದಿಗೆ ಮುನ್ನುಗ್ಗಿ, ಇಲ್ಲದಿದ್ದರೆ ಜೀವನಪರ್ಯಂತ ಜೀತದಾಳಾಗಿಯೇ ಉಳಿದುಕೊಳ್ಳಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಅತಿಥಿ ಶಿಕ್ಷಕರಿಗೆ ಸಲಹೆ ನೀಡಿದ್ರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಂದಿನ ಹೋರಾಟದ ನಡೆ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಮತ್ತು ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಭಿಮಾನ ಬದಿಗೊತ್ತಿ ಅತಿಥಿ ಉಪನ್ಯಾಸಕರಾಗಿಯೇ ಸರ್ಕಾರದ ಮರ್ಜಿಗೆ ಒಳಪಟ್ಟು ಅದೆಷ್ಟು ದಿನ ಇರಲು ಸಾಧ್ಯ. ಆತ್ಮವಿಶ್ವಾಸದಿಂದ ಮುನ್ನುಗ್ಗಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ಎಂದು ಸೂಚನೆ ನೀಡಿದರು.
ಸೇವಾ ಅವಧಿಯ ಅರ್ಧಕ್ಕಿಂತ ಹೆಚ್ಚು ಭಾಗ ಅತಿಥಿಗಳಾಗಿಯೇ ಕಳೆದಿದ್ದೀರಿ. ಈಗಾಗಲೇ ಹಲವು ಹಂತದ ಹೋರಾಟಗಳನ್ನೂ ಸಹ ಮಾಡಿದ್ದೀರಿ. ಆದರೆ, ಫಲಿತಾಂಶ ಮಾತ್ರ ಸಿಕ್ಕಿಲ್ಲ. ಸರ್ಕಾರಗಳು ಕೇವಲ ಸುಳ್ಳು ಭರವಸೆಗಳನ್ನು ಮಾತ್ರ ನೀಡಿವೆ. ಈ ಸುಳ್ಳು ಮಾತುಗಳನ್ನು ನಂಬಿದ್ದು ಸಾಕು. ಹೋರಾಟಕ್ಕೆ ಇಳಿಯಿರಿ, ಅದಕ್ಕೆ ನಾನೂ ಧ್ವನಿಯಾಗಿ ನಿಲ್ಲುತ್ತೇನೆಂದು ಭರವಸೆ ನೀಡಿದರು. ಅಲ್ಲದೇ, ಕೇಂದ್ರ ಸರ್ಕಾರ ಕನಿಷ್ಠ ವೇತನ ಕಾಯ್ದೆ ಇದ್ದರೂ ಸಮಾಜದ ಭವಿಷ್ಯ ರೂಪಿಸುವ ಉಪನ್ಯಾಸಕರಿಗೆ ಕಡಿಮೆ ಸಂಬಳ ನೀಡುವ ಮೂಲಕ ದ್ರೋಹ ಮಾಡಲಾಗುತ್ತಿದೆ ಎಂದು ಆಯನೂರು ಬೇಸರ ವ್ಯಕ್ತಪಡಿಸಿದರು.