ಶಿವಮೊಗ್ಗ: ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರಿದ್ದು ಅವರಿಗೆ ಸೌಲಭ್ಯಗಳನ್ನು ದೊರೆಕಿಸಿಕೊಡಲು ಅನುಕೂಲವಾಗುವಂತೆ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದೆ ಎಂದು ಸಂಘದ ಗೌರವಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.
ಅಸಂಘಟಿತ ಕಾರ್ಮಿಕರ ಕಾರ್ಡ್ ವಿತರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಮಿಕ ಇಲಾಖೆ ಅಡಿಯಲ್ಲಿ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಸರ್ಕಾರದ ಸೌಲಭ್ಯಗಳು ಅಸಂಘಟಿತ ಕಾರ್ಮಿಕರು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಹಮಾಲಿಗಳು, ಟೈಲರ್, ಚಿಂದಿ ಆಯುವವರು, ಮೆಕ್ಯಾನಿಕ್, ಮನೆಕೆಲಸದವರು, ಕುಂಬಾರರು, ಕ್ಷೌರಿಕರು ಸೇರಿದಂತೆ ಹೀಗೆ ಹಲವು ಬಗೆಯ ಕಾರ್ಮಿಕರನ್ನು ಗುರ್ತಿಸಿ ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿ ಗುರುತಿನ ಚೀಟಿ ನೀಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಸುಮಾರು 32 ಕಾರ್ಮಿಕ ಮಂಡಳಿಗಳ ರಚನೆ ಮಾಡಿದೆ, ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಕಾರ್ಮಿಕ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿಯೂ ಕಾರ್ಮಿಕ ಸಮುದಾಯಗಳಿಗೆ ಸಹಾಯ ಧನ ನೀಡಿರುವುದು ಶ್ಲಾಘನೀಯ ಎಂದರು.