ಶಿವಮೊಗ್ಗ : ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಬಾಕಿ ಇರುವ ವೇತನ ಪಾವತಿ ಮಾಡಲು ಆದೇಶಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ತಮ್ಮ ಹೋರಾಟಕ್ಕೆ ಬೆಂಬಲಿಸಿದ ಸದಸ್ಯರಿಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಧನ್ಯವಾದ ಸಲ್ಲಿಸಿದರು.
ನಗರದಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ನಿಂದ ಆಗಸ್ಟ್ ತಿಂಗಳವರೆಗೆ ವೇತನ ಪಾವತಿಸದೇ ಉಚಿತವಾಗಿ ದುಡಿಸಿಕೊಳ್ಳುತ್ತಿದ್ದರಿಂದ ಆರ್ಥಿಕವಾಗಿ ದುರ್ಬಲರಾಗಿ ಅತಿಥಿ ಉಪನ್ಯಾಸಕರು ಜೀವನ ನಿರ್ವಹಿಸಲು ಕಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಅತಿಥಿ ಉಪನ್ಯಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ವಿಧಾನಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದೆ.
ಉನ್ನತ ಶಿಕ್ಷಣ ಸಚಿವರು ಗೈರು ಹಾಜರಾಗಿದ್ದರಿಂದ ಸದನದಲ್ಲಿ ವೇತನ ಬಿಡುಗಡೆಗೆ ಒತ್ತಾಯಿಸಿ ಹೋರಾಟ ಮಾಡಿದ್ದರಿಂದ ಸದನಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ವೇತನ ಬಿಡುಗಡೆಗೆ ಆದೇಶಿಸಿದರು ಎಂದರು. ವೇತನ ಬಿಡುಗಡೆ ಮಾಡುವಂತೆ ವಿಧಾನಪರಿಷತ್‌ನ ಮೂವರು ಸದಸ್ಯರು ಪ್ರಸ್ತಾವನೆ ಸಲ್ಲಿಸಿದ್ದರು. ಯಾವುದೇ ವೇತನ ಬಾಕಿ ಇಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರಿಸಿದ್ದರಿಂದ ಕಠಿಣ ನಿಲುವು ತೆಗೆದುಕೊಂಡು ವೇತನ ಬಿಡುಗಡೆಗೆ ತಾವು ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ನನ್ನ ಹೋರಾಟ ಗೌರವಿಸಿ ಸದನಕ್ಕೆ ಬಂದು ವೇತನ ಬಿಡುಗಡೆಗೆ ಆದೇಶಿಸಿರುವುದು ಖುಷಿ ತಂದಿದೆ ಎಂದರು.
ಮೂರು ತಿಂಗಳ ವೇತನ ಒಂದು ವಾರದಲ್ಲಿ ಬಿಡುಗಡೆಯಾಗುವ ಭರವಸೆ ಇದೆ. ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಳ್ಳದೇ ಧೈರ್ಯದಿಂದಿರಿ ಎಂದ ಅವರು, ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ನ್ಯಾಯಯುತವಾಗಿ ಪಡೆದುಕೊಳ್ಳೋಣ ಎಂದರು. ಅತಿಥಿ ಉಪನ್ಯಾಸಕರಂತೆಯೇ ರಾಜ್ಯದಲ್ಲಿರುವ ಸುಮಾರು 22 ಸಾವಿರ ಅತಿಥಿ ಶಿಕ್ಷಕರ ವೇತನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಸಂಘಟನೆಯಾಗಿ ನಿಂತರೆ ಬೇಡಿಕೆಗಳು ಈಡೇರುತ್ತವೆ ಎಂದು ಹೇಳಿದರು.