ಶಿವಮೊಗ್ಗ: ಮೋದಿ ಮತ್ತು ಗುಜರಾತ್ ಮಾದರಿಯ ಚುನಾವಣೆ ಇಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು. ಶಾಸಕರ ಹೊಸ ಕಾರ್ಯಾಲಯವನ್ನು ಶುಭಾರಂಭ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕುಟುಂಬ ರಾಜಕಾರಣವಿದೆ. ವಯಸ್ಸಿನ ಏರುಪೇರಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಮೋದಿಯವರು ತಮ್ಮ ಕುಟುಂಬವನ್ನೇ ಏಕೆ, ತಮ್ಮ ತಾಯಿಯವರನ್ನು ರಾಜಕೀಯದ ನೆರಳನ್ನೂ ಕಾಣದಂತೆ ಸಾಕಿದ್ದವರು. ಅಂತಹ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಇಲ್ಲಿ ಯಾರಿಗೂ ಇಲ್ಲ. ಹಾಗಾಗಿ ಗುಜರಾತ್ ಮಾದರಿಯ, ಮೋದಿ ಮಾದರಿಯ ಚುನಾವಣೆ ಇಲ್ಲಿ ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಬಂಡೀಪುರದಲ್ಲಿ ಹೈ ಅಲರ್ಟ್.. ವಾಹನ ಸಂಚಾರ ನಿರ್ಬಂಧ
ಬಿಜೆಪಿ ಪಟ್ಟಿ ಪ್ರಕಟವಾದ ಮೇಲೆ ನನ್ನ ನಿರ್ಧಾರ: ಮೋದಿ ಹೆಸರು ಹೇಳುವ ಅರ್ಹತೆ ಅನೇಕರಿಗೆ ಇಲ್ಲ. ಬಿಜೆಪಿ ಎಂಬುದು ಒಳ್ಳೆಯ ಬಸ್ಸೇ ಇರಬಹುದು. ಆದರೆ ಅದನ್ನು ಓಡಿಸುವ ಡ್ರೈವರ್, ನಿರ್ವಹಣೆ ಮಾಡುವ ಕಂಡಕ್ಟರ್ ಮತ್ತು ಬಸ್‌ನಲ್ಲಿದ್ದ ಪ್ರಯಾಣಿಕರು ಕೆಟ್ಟವರಾದರೆ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದರು. ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿ ಪಟ್ಟಿ ಪ್ರಕಟವಾದ ಮೇಲೆ ನನ್ನ ನಿರ್ಧಾರವನ್ನು ಮಾಡಬೇಕಾಗುತ್ತದೆ. ಆದರೆ ಅದೇ ಮುಖ್ಯವಲ್ಲ. ಮುಖ್ಯವಾಗಿ ಶಿವಮೊಗ್ಗದಲ್ಲಿ ಶಾಂತಿ ಬಯಸುವವನು ನಾನು. ಈಗಲೂ ಮತ್ತೆ ಮತ್ತೆ ಹೇಳುತ್ತೇನೆ. ಕೆ.ಎಸ್. ಈಶ್ವರಪ್ಪ ಅವರಾಗಲಿ, ಅಥವಾ ಅವರ ಮಗನೇ ಆಗಲಿ ಸ್ಪರ್ಧೆ ಮಾಡಬೇಕು. ಅವರ ವಿರುದ್ಧವೇ ನಾನು ಸ್ಪರ್ಧಿಸುತ್ತೇನೆ. ಹಾಗಂತ ಅವರ ಕೈಗೊಂಬೆಯಂತಿರುವವರು ಸ್ಪರ್ಧಿಸಿದರೂ ಕೂಡ ನಾನು ಅವರ ವಿರುದ್ಧ ಸ್ಪರ್ಧಿಸುತ್ತೇನೆ. ನನಗೆ ಶಾಂತಿ ಮುಖ್ಯ ಎಂದರು.
ನನ್ನ ಎಲ್ಲಾ ನಿರ್ಧಾರಗಳನ್ನು ಎಲ್ಲರ ಸಲಹೆ ಪಡೆದೇ ತೆಗೆದುಕೊಳ್ಳುತ್ತೇನೆ - ಮಂಜುನಾಥ್ :ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ನಿರ್ದೇಶಕರ ಕೊರತೆ ಇದೆ ಎಂದು ಮಾರ್ಮಿಕವಾಗಿ ನುಡಿದರು. ನೀವು ವಿಧಾನಸಭೆ ಪ್ರವೇಶ ಮಾಡಲೇಬೇಕು ಎಂದು ಹಲವು ಗೆಳೆಯರು, ಮತದಾರರು, ಬಿಜೆಪಿ ಕಾರ್ಯಕರ್ತರು ಅಭಿಲಾಷೆ ಪಡುತ್ತಿದ್ದಾರೆ. ಕಾರ್ಮಿಕರು, ಆಟೋ ಚಾಲಕರು ಒತ್ತಾಯ ಮಾಡುತ್ತಿದ್ದಾರೆ. ಅವರ ಪ್ರೀತಿಗೆ ಹೃದಯ ತುಂಬಿ ಬಂದಿದೆ. ನನ್ನ ಎಲ್ಲ ನಿರ್ಧಾರಗಳನ್ನು ಎಲ್ಲರ ಸಲಹೆ ಪಡೆದೇ ತೆಗೆದುಕೊಳ್ಳುತ್ತೇನೆ ಈ ಎಲ್ಲ ನಿರ್ಧಾರ ತೆಗೆದುಕೊಳ್ಳಲು ಮೂರು ನಾಲ್ಕು ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದರು.
ಏಪ್ರಿಲ್ 9ಕ್ಕೆ ಬಿಜೆಪಿ ಫಸ್ಟ್ ಲಿಸ್ಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,''ನಾಲ್ಕು ಹಂತದದಲ್ಲಿ ಅಭಿಪ್ರಾಯ ಪಡೆದು ಆಯ್ಕೆ ಪ್ರಕ್ರಿಯೆ ನಡೆದಿದೆ. ಕ್ಷೇತ್ರ, ಜಿಲ್ಲಾ ಮಟ್ಟದ ಆಯ್ಕೆಯ ನಂತರ ರಾಜ್ಯ ಮಟ್ಟದ ನಾಯಕರ ಬಳಿ ಪಟ್ಟಿ ಹೋಗಿದೆ. ರಾಜ್ಯದ ಸಮ್ಮತಿಯಿಂದ ಈಗ ಕೇಂದ್ರಕ್ಕೆ ಪಟ್ಟಿ ಹೋಗಿದೆ. ಕೇಂದ್ರದ ಚುನಾವಣಾ ಸಮಿತಿಯವರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸಭೆ; ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್