ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಭೀಷ್ಮನಿಗಾದ ಸ್ಥಿತಿ ಆಗಿದೆ. ಕುರುಕ್ಷೇತ್ರ ಯುದ್ಧ ಮಾತ್ರ ಮಾಡಬೇಕು. ಆದರೆ, ಪಟ್ಟಕ್ಕೆ ಮಾತ್ರ ಕೂರುವ ಹಾಗಿಲ್ಲ ಎಂಬಂತಾಗಿದೆ ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಒಂದು ಜವಾಬ್ದಾರಿ ಇದೆ. ಅವರು ಎಲ್ಲಾ ಕಡೆ ಓಡಾಡುತ್ತಾರೆ. ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಹೇಳಿ ಅಧಿಕಾರದಿಂದ ಕೆಳಗೆ ಇಳಿಸಿರುವುದು ನನಗೆ ದುಃಖವಾಗಿದೆ. ಅವರಿಗೆ ಅಧಿಕಾರ ನಡೆಸಲು ವಯಸ್ಸಾಗಿತ್ತು. ಆದರೆ ಈಗ ಬರ ಅಧ್ಯಯನ ನಡೆಸಲು ಅವರನ್ನು ಬಳಸಿಕೊಳ್ಳುತ್ತಿದ್ದಿರಲ್ಲಾ. ಅವರಿಗೆ ವಂಚಿಸಲು, ಮೋಸ ಮಾಡಲು ಅಧಿಕಾರದಿಂದ ವಯಸ್ಸಿನ ನೆಪ ಹೇಳಿ ಕೆಳಗೆ ಇಳಿಸಿದ್ದೀರಿ. ಪಕ್ಷ ಕಟ್ಟಿದ ಅವರಿಗೆ ಅವಮಾನ ಮಾಡಿ, ಅವರಿಂದ ಅಧಿಕಾರ ಕಸಿದುಕೊಂಡಿರಿ. ಆದರೆ ಈಗ ಅವರಿಗೆ ವಯಸ್ಸು ವಾಪಸ್ ಬಂದಿದೆಯಾ ಎಂದು ಬಿಜೆಪಿ ನಾಯಕರನ್ನ ಪ್ರಶ್ನೆ ಮಾಡಿದ್ದಾರೆ.
ನಾನು ಅವರ ಶಿಷ್ಯ ಅವರಿಗಾದ ಅನ್ಯಾಯದ ಬಗ್ಗೆ ನನಗೆ ನೋವಿದೆ. ಯಡಿಯೂರಪ್ಪ ಅವರದ್ದು ಒಂದು ರೀತಿ ಭೀಷ್ಮನ ಪರಿಸ್ಥಿತಿಯಾಗಿದೆ. ಕುರುಕ್ಷೇತ್ರ ಯುದ್ಧ ಮಾಡಬೇಕು, ಆದರೆ ಪಟ್ಟಕ್ಕೆ ಕೂರುವ ಹಾಗಿಲ್ಲ. ಬೇರೆಯವರನ್ನು ಕೂರಿಸಲು ಹೋರಾಡಬೇಕಿದೆ ಎಂದು ಕಿಚಾಯಿಸಿದರು. ಇದಕ್ಕಿಂತ ಯಡಿಯೂರಪ್ಪ ಅವರನ್ನು ಇನ್ನೇನು ಅವಮಾನಿಯವಾಗಿ ನಡೆಸಿಕೊಳ್ಳಬಹುದು ಹೇಳಿ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪ ಬಹಳ ಹಿರಿಯರು, ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರು. ಈಗ ಮೊದಲಿನ ಯಡಿಯೂರಪ್ಪ ಇಲ್ಲ. ಆ ಕೋಪ ತಾಪ ಇದ್ದಿದ್ದರೆ, ನನಗೆ ಈಗ ಯೌವನ ಬಂತ ಅಂತ ಹೇಳುತ್ತಿದ್ದರು. ಬಿಜೆಪಿ ಪಕ್ಷದವರು ಯಡಿಯೂರಪ್ಪಗೆ ಅವಮಾನ ಮಾಡುತ್ತಿದ್ದಾರೆ. ತಂದೆಗೆ ಆದ ಅವಮಾನದ ಬಗ್ಗೆ ಮಕ್ಕಳು ಸಹ ಕೇಳುತ್ತಿಲ್ಲ. ನಾನು ಅವರ ಶಿಷ್ಯನಾಗಿ ಕೇಳುತ್ತಿದ್ದೇನೆ. ವೇಗವಾಗಿ ಓಡಾಡುವವರನ್ನು ಬಿಟ್ಟು ಒಂಟಿ ಕಾಲಿನಲ್ಲಿ ಓಡಾಡುವವರನ್ನು ಕರೆ ತಂದು ಪಟ್ಟ ಕಟ್ಟಿದರು. ಯಡಿಯೂರಪ್ಪಗೆ ಬಿಜೆಪಿ ಮಾಡಿದ ಅಪಮಾನವನ್ನು ಯಾರು ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ: ಬಿಜೆಪಿಯಲ್ಲಿ ನಾಯಕತ್ವಕ್ಕೆ ಬರ ಇದೆ. ನಾಯಕತ್ವವೇ ಇಲ್ಲದ ಪ್ರವಾಸ ಇವರದು. ಅವರಲ್ಲಿ ಯಾರು ನಾಯಕರೇ ಇಲ್ಲ. ಪ್ರವಾಸಕ್ಕೆ ಹೋಗು ಎನ್ನುವರು ಯಾರು. ಯಾಕೆ ಹೋಗಿಲ್ಲ ಅಂತ ಕೇಳುವವರು ಯಾರು. ಬಿಜೆಪಿ ಅನಾಯಕತ್ವದಿಂದ ಬಳಲುತ್ತಿರುವ ಪಕ್ಷವಾಗಿದೆ. ಇವರ ಹೇಳಿಕೆಗಳಿಗೆ ಏನು ತೂಕ ಬರುತ್ತದೆ ಎಂದರು.
ಸಂಸದ ರಾಘವೇಂದ್ರ ಹೋರಾಟದಿಂದ ಬಂದಿಲ್ಲ: ಸಂಸದ ರಾಘವೇಂದ್ರ ಹೋರಾಟದಿಂದ ರಾಜಕೀಯಕ್ಕೆ ಬಂದಿಲ್ಲ. ರಾಜಕೀಯಕ್ಕೆ ಬಂದ ಮೇಲಾದರೂ ಹೋರಾಟ ಮಾಡಲಿ ಎಂದು ಇಂದು ಬರ ಅಧ್ಯಯನ ತಂಡದ ನೇತೃತ್ವ ವಹಿಸಿಕೊಂಡಿರುವುದಕ್ಕೆ ವ್ಯಂಗ್ಯವಾಡಿದರು.
ರಾಜ್ಯದ ಬರಕ್ಕೆ ಕೇಂದ್ರ ಸ್ಪಂದಿಸಬೇಕು: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದೆ. ಬರಗಾಲದ ಕಾರಣದಿಂದ ರೈತರ ಸಮಸ್ಯೆ ಉಲ್ಬಣವಾಗಿದೆ. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಫೆಬ್ರವರಿ ನಂತರ ಕಾಡಬಹುದು. 17 ಸಾವಿರ ಕೋಟಿ ರೂ. ಹಣವನ್ನು ರಾಜ್ಯ ನಿರೀಕ್ಷಿಸಿದೆ.
ಈ ಬಗ್ಗೆ ಕೇಂದ್ರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನಾಲ್ಕು ಜನ ಕೇಂದ್ರ ಮಂತ್ರಿಗಳು, 26 ಸಂಸದರು ಇದ್ದಾರೆ. ಕೇಂದ್ರ ರಾಜ್ಯ ಸರ್ಕಾರದ ಮೇಲೆ ಸೇಡು ತೀರಿಸಿಕೊಂಡಂತೆ ಆಗಿದೆ. ಕೇಂದ್ರ ಸರ್ಕಾರ ಸಹಾಯ ಮಾಡದೇ ಇರುವಂತಹ ಮನಸ್ಥಿತಿ ನೋಡಿದರೆ ರಾಜ್ಯದ ಜನ ತಪ್ಪು ಮಾಡಿದ್ದೇವೆ ಎಂದು ಅನ್ನಿಸುತ್ತಿದೆ. ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಬರ ಅಧ್ಯಯನಕ್ಕೆ ಹೊರಟಿರುವುದು ಒಂದು ವಿಡಂಬನೆ ಎಂದರು.
ಇದನ್ನೂ ಓದಿ: ಆಡಳಿತ ವೈಫಲ್ಯ ಖಂಡಿಸಿ ಸರ್ಕಾರದ ವಿರುದ್ಧ 3 ದಿನ ಧರಣಿ: ಬಿ ಎಸ್ ಯಡಿಯೂರಪ್ಪ