ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನ ಬಾಕಿ ಇದ್ದು, ಚುನಾವಣಾ ಪ್ರಚಾರ ರಂಗೇರಿದೆ. ಸೊರಬದ ಹೊಳೆಕೊಪ್ಪ ಗ್ರಾಮದಲ್ಲಿ ಕುಮಾರ ಬಂಗಾರಪ್ಪನವರ ಪುತ್ರಿ ಲಾವಣ್ಯ ಪ್ರಚಾರದಲ್ಲಿ ತೊಡಗಿದರೆ, ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರ ಪುತ್ರಿ ಮೇಘಾ ಮತ ಪ್ರಚಾರ ನಡೆಸಿದರು.
ಲಾವಣ್ಯ ತಂದೆಯ ಗೆಲುವಿಗಾಗಿ ಮಹಿಳೆಯರ ಬಳಿಯೇ ಹೋಗಿ ಮತ ಯಾಚಿಸುತ್ತಿದ್ದಾರೆ. ಪ್ರಚಾರದ ವೇಳೆ ನಿಮಗೆ ಏನು ಬೇಕಿದೆ ಹೇಳಿ. ನಮ್ಮ ತಂದೆ ಪ್ರಚಾರಕ್ಕೆ ಬಂದಾಗ ನಿಮ್ಮೊಂದಿಗೆ ಹೆಚ್ಚಾಗಿ ಮಾತನಾಡದೇ ಇರಬಹುದು. ಹಾಗಾಗಿ ನಾನು ಕೇಳಲು ಬಂದಿದ್ದೇನೆ. ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕುಮಾರ ಬಂಗಾರಪ್ಪ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಮತ್ತಷ್ಟು ಅಭಿವೃದ್ಧಿಗೊಳಿಸಿ ಸೊರಬ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ ಮಾಡಬೇಕೆಂಬ ಗುರಿ ಹೊಂದಿದ್ದಾರೆ. ಇದಕ್ಕೆ ಕ್ಷೇತ್ರದ ಜನತೆ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿ ಮುಂದಿಟ್ಟು ಮತ ಕೇಳುತ್ತಿದ್ದೇನೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಯೋಜನೆಗಳನ್ನು ತಂದೆ ಪ್ರಾಮಾಣಿಕವಾಗಿ ಜನತೆಗೆ ತಲುಪಿಸಿದ್ದಾರೆ. ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ವೇಳೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ. ತಂದೆಯ ಗೆಲುವು ನಿಶ್ಚಿತ ಎಂದು ಲಾವಣ್ಯ ವಿಶ್ವಾಸ ವ್ಯಕ್ತಪಡಿಸಿದರು.
ಗೋಪಾಲಕೃಷ್ಣ ಬೇಳೂರು ಪರ ಮಗಳು ಮೇಘಾ ಅವರಿಂದ ಮತಬೇಟೆ: ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರ ಮಗಳು ಮೇಘಾ ಮತಯಾಚನೆ ನಡೆಸುತ್ತಿದ್ದಾರೆ. ಮೇಘಾ ಆನಂದಪುರಂ ಹೋಬಳಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡರು. ಹಿರಿಯರ ಕಾಲಿಗೆ ಬಿದ್ದು ಮತ ಯಾಚಿಸಿದ್ದು ಕಂಡು ಬಂತು. ತಂದೆ ಸೋತಾಗಲೂ ನಿಮ್ಮ ಜೊತೆಗಿದ್ದರು, ಗೆದ್ದಾಗಲೂ ಇರುತ್ತಾರೆ. ಅವರನ್ನು ಭೇಟಿ ಮಾಡಲು ನಿಮಗೆ ಯಾವ ನಾಯಕರ ಅವಶ್ಯಕತೆ ಇಲ್ಲ. ನೀವೇ ನೇರವಾಗಿ ಹೋಗಿ ಭೇಟಿ ಮಾಡಬಹುದು ಎಂದು ತಿಳಿಸಿ ಮತ ಕೇಳುತ್ತಿದ್ದರು. ಈ ಸಂದರ್ಭದಲ್ಲಿ ಕಣ್ಣೀರು ಹಾಕಿದ ಮೇಘ ಅವರನ್ನು ನೆರೆದಿದ್ದವರು ಸಮಾಧಾನಪಡಿಸಿದ್ದು ವಿಶೇಷವಾಗಿತ್ತು.
ಇದನ್ನೂಓದಿ: ಹುಟ್ಟೂರಿನಲ್ಲಿ ಜಿ.ಟಿ.ದೇವೇಗೌಡ ಮತ ಪ್ರಚಾರ, ತಮಟೆ ಸದ್ದಿಗೆ ಡ್ಯಾನ್ಸ್- ವಿಡಿಯೋ