ಶಿವಮೊಗ್ಗ: ಕೊರೊನಾ ಎರಡನೇ ಅಲೆ ಮತ್ತೊಮ್ಮೆ ಜನರನ್ನು ಭಾದಿಸಲು ಪ್ರಾರಂಭಿಸಿದೆ. ಇದರಿಂದ ಶಿವಮೊಗ್ಗ ಜಿಲ್ಲಾ ಪೊಲೀಸರು ಜಿಲ್ಲಾದ್ಯಂತ ಕೊರೊನಾ ಜಾಗೃತಿ ಹಾಗೂ ಮಾಸ್ಕ್ ಅಭಿಯಾನ ನಡೆಸುತ್ತಿದ್ದಾರೆ.
ಇಂದು ಶಿವಮೊಗ್ಗ ನಗರದ್ಯಾಂತ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಟೇಕಣ್ಣನವರ್ ನೇತೃತ್ವದಲ್ಲಿ ಕೊರೊನಾ ಜಾಗೃತಿ ಹಾಗೂ ಮಾಸ್ಕ್ ಅಭಿಯಾನ ನಡೆಸಿದರು. ನಗರದ ಅಶೋಕ ವೃತ್ತದಲ್ಲಿ ಶೇಖರ್ ಟೇಕಣ್ಣನವರ್ ತಮ್ಮ ಸಿಬ್ಬಂದಿಗಳೊಂದಿಗೆ ಜಾಗೃತಿ ಮೂಡಿಸಿದರು. ಬೈಕ್ ಹಾಗೂ ಕಾರಿನಲ್ಲಿ ಮಾಸ್ಕ್ ಇಲ್ಲದೇ ಬರುವವರಿಗೆ ಮಾಸ್ಕ್ ಹಾಕದೆ ಹೋದ್ರೆ ಆಗುವ ಅನಾಹುತದ ಬಗ್ಗೆ ತಿಳಿಸಿ ದಂಡ ಹಾಕಿದರು.
ನಂತರ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಸಂಚಾರ ಮಾಡಿ ಬಸ್ನವರಿಗೆ ಸ್ಯಾನಿಟೈಸರ್ ವಿತರಿಸಿದರು. ಈ ವೇಳೆ, ಖಾಸಗಿ ಬಸ್ ನಿಲ್ದಾಣದಲ್ಲಿ ಮಾಸ್ಕ್ ಇಲ್ಲದೇ ಬಂದಿದ್ದ ಮಕ್ಕಳಿಗೆ ಹಾಗೂ ವೃದ್ದರಿಗೆ ಮಾಸ್ಕ್ ಹಾಕಿ ಮಾನವಿಯತೆ ಮೆರೆದರು.
ಮನೆಯಿಂದ ಹೊರ ಬಂದಾಗ ಮಾಸ್ಕ್ ಹಾಕಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು. ಈ ವೇಳೆ ಡಿವೈಎಸ್ಪಿ ಪ್ರಶಾಂತ ಮುನ್ನೂಳಿ ಹಾಗೂ ಅಭಯ ಪ್ರಕಾಶ್ ಹಾಜರಿದ್ದರು. ನಿನ್ನೆ ಒಂದೇ ದಿನ ಪೊಲೀಸರು 517 ಮಾಸ್ಕ್ ಕೇಸು ದಾಖಲಿಸಿ 80,800 ರೂ ದಂಡ ವಸೂಲಿ ಮಾಡಿದ್ದಾರೆ.