ಶಿವಮೊಗ್ಗ: ಸ್ಮಶಾನದಲ್ಲಿ ಸುಟ್ಟ ಶವದ ಬೂದಿಯೇ ಮಾಯವಾದ ವಿಚಿತ್ರ ಘಟನೆ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರ ಸಮೀಪದ ಹೊರಬೈಲಿನ ಸ್ಮಶಾನದಲ್ಲಿ ಜರುಗಿದೆ. ಸ್ಮಶಾನದಲ್ಲಿ ಕೇವಲ ಶವದ ಬೂದಿಯಷ್ಟೇ ಅಲ್ಲದೇ, ಸ್ಮಶಾನದಲ್ಲಿದ್ದ ಕಬ್ಬಿಣದ ರಾಡ್‌ಗಳನ್ನು ಯಾರೋ ಕದ್ದೊಯ್ದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ತೀರ್ಥಹಳ್ಳಿ ಪಟ್ಟಣದ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರದಲ್ಲಿ 3 ದಿನದ ಹಿಂದೆ ಗ್ರಾಮದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆ ಮಹಿಳೆಯ ಶವವನ್ನು ಇಲ್ಲಿನ ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ ದಹನ ಮಾಡಲಾಗಿತ್ತು. ಆದರೆ ಮಾರನೇ ದಿನ ಸಾವಿಗೀಡಾದ ಮಹಿಳೆ ಸಂಬಂಧಿಗಳು ಸ್ಮಶಾನದಲ್ಲಿ ಅಳಿದುಳಿದ ಕಟ್ಟಿಗೆ ಕೊಳ್ಳಿ ಹಚ್ಚುವ ಪದ್ಧತಿಯಂತೆ ಕಟ್ಟಿಗೆಯನ್ನು ಮುಂದೆ ಹಾಕಿ ಸುಟ್ಟುಹೋಗುವಂತೆ ಒಂದು ಎಳನೀರು ಇಟ್ಟು ವಾಪಸ್ ಬಂದಿದ್ದರು.
ಸ್ಮಶಾನಕ್ಕೆ ಬಂದು ಚಿತಾಭಸ್ಮ ನೋಡಿದಾಗ ಕಾದಿತ್ತು ಅಚ್ಚರಿ.. ಮೂರನೇ ದಿನವಾದ ಬುಧವಾರ ಶವದ ಚಿತಾಭಸ್ಮ ಬೂದಿ ತೆಗೆಯಲು ಕುಟುಂಬಸ್ಥರು ಹಾಗೂ ಸಂಬಂಧಿಕರು ದೂರಿನ ಊರು, ಪಟ್ಟಣಗಳಿಂದ ಸ್ಮಶಾನಕ್ಕೆ ಬಂದಿದ್ದರು. ಆದರೆ ಸ್ಮಶಾನಕ್ಕೆ ಬಂದು ಚಿತಾಭಸ್ಮ ಬೂದಿ ನೋಡಿದಾಗ, ಸುಟ್ಟ ಶವದ ಬೂದಿ ಮಂಗ ಮಾಯವಾಗಿತ್ತು. ಕುಟುಂಬಸ್ಥರು ಹಾಗೂ ಬೂದಿ ಹಾಕಲೂ ಬಂದ ಜನರು ದಿಗ್ಬ್ರಮೆಗೊಂಡು ಅತ್ತ ಇತ್ತ ವಿಚಾರಿಸತೊಡಗಿದರು. ಇದೂ ಯಾರೋ ಅಪರಿಚಿತರ ಕೈವಾಡ ಇರಬಹುದೆಂದು ಶಂಕಿಸಿದರು.
ಮಹಿಳೆಯ ಚಿತಾಭಸ್ಮದ ಬೂದಿ ಕದ್ದ ಕಳ್ಳರು ಬರೀ ಮೂರು ಮೂಳೆಯನ್ನು ಅಲ್ಲೇ ಒಂದು ಬದಿಯಲ್ಲಿ ಇಟ್ಟಿದ್ದರು. ಕುಟುಂಬದವರು ಆ ಮೂರು ಮೂಳೆಗಳನ್ನು ತಂದು ಮುಂದಿನ ಕಾರ್ಯ ನೆರವೇರಿಸಿದರು. ಬೇರೆ ಊರುಗಳಿಂದ ಬಂದ ಜನರು ಹಾಗೂ ಕುಟುಂಬಸ್ಥರು ತಂದಿದ್ದ ವಿವಿಧ ಪದಾರ್ಥಗಳನ್ನು ಸಾವಿಗೀಡಾದ ಮಹಿಳೆ ಶವ ದಹನದ ಸ್ಥಳದಲ್ಲಿ ಹಿಂದೂ ಧರ್ಮದ ಪದ್ಧತಿಯಂತೆ ನೆರವೇರಿಸಿದರು.
ಇದನ್ನೂ ಓದಿ.. 'ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸೋಲ್ಲ': ಸತ್ರೂ ಬಿಜೆಪಿ ಸೇರಲ್ಲ ಎಂದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು
ಕಂಗಾಲಾಗಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ ಕುಟುಂಬಸ್ಥರು.. ಸ್ಮಶಾನದಲ್ಲಿ ಸುಟ್ಟ ಶವದ ಬೂದಿ ಇಲ್ಲದ್ದನ್ನು ನೋಡಿ ಕಂಗಾಲಾದ ಕುಟುಂಬಸ್ಥರು ಆಶ್ಚರ್ಯಚಕಿತರಾಗಿ ಊರಿನ ಗ್ರಾಮಸ್ಥರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಸ್ಮಶಾನಕ್ಕೆ ಹೋಗಿ ನೋಡಿದಾಗ ಕುಟುಂಬಸ್ಥರು ಹೇಳಿದ ವಿಷಯ ಸತ್ಯವಾಗಿತ್ತು. ಕಳ್ಳರು ಶವ ಸಂಸ್ಕಾರ ಮಾಡುವಾಗ ಅದರಲ್ಲಿ ಬಂಗಾರ, ಬೆಳ್ಳಿ ಹಾಗೂ ನಾಣ್ಯಗಳನ್ನು ಹಾಕಿರಬಹುದೆಂದು ಯೋಚಿಸಿ ಕಳ್ಳರು ಬೂದಿಯನ್ನು ತೆಗೆದುಕೊಂಡು ಹೋಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಶವ ಸಂಸ್ಕಾರದ ಕಟ್ಟಿಗೆ ಕಳ್ಳತನವಾಗುವ ವಿಚಾರ ತಿಳಿದಿತ್ತು. ಈಗ ಶವ ಸಂಸ್ಕಾರದ ಬೂದಿಯೇ ಕಳ್ಳತನವಾಗಿರುವುದು ಅಚ್ಚರಿ ಘಟನೆಗೆ ಸಾಕ್ಷಿಯಾಗಿದೆ. ಕಳ್ಳರು ಶವದ ಬೂದಿ ಕದಿಯುತ್ತಿರುವುದು ಇದೇ ಮೊದಲು ಆಗಿರಬಹುದು ಎಂದು ಗ್ರಾಮಸ್ಥರು ಹಾಸ್ಯಾಸ್ಪದವಾಗಿ ಆಡಿಕೊಂಡು ಮಾತಾಡುತ್ತಿರುವುದು ಕಂಡುಬಂತು.