ಶಿವಮೊಗ್ಗ: ಸಾಗರ ತಾಲೂಕಿನ ಬಳಸಗೋಡು ಗ್ರಾಮದ ಮಧುಕರ್ ಅವರ ಗೋದಾಮಿನಿಂದ ದೋಲರಾಮ್ ಅವರಿಗೆ ಸೇರಿದ 24.500 ಕೆ.ಜಿ ತೂಕದ 350 ಚೀಲ ಕೆಂಪಡಿಕೆಯನ್ನು ಲಾರಿಯಲ್ಲಿ ಸಾಗಿಸಲಾಗಿರುತ್ತದೆ. ಆದರೆ ಲಾರಿ ಗುಜರಾತ್ನ ಅಹಮದಬಾದ್ ನಿಗದಿತ ಸಮಯಕ್ಕೆ ಲಾರಿ ತಲುಪಿರುವುದಿಲ್ಲ. ಲಾರಿ ಚಾಲಕನನ್ನು ಸಂಪರ್ಕಿಸಿದಾಗ ನಂಬರ್ ಸ್ವೀಚ್ಡ್ ಆಫ್ ಆಗಿರುತ್ತದೆ. ಇದರಿಂದ ಲಾರಿ ಕಳಕ್ಳತನವಾಗಿದೆ ಎಂದು ಮಧುಕರ್ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಬೆನ್ನು ಹತ್ತಿದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್, ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಹೀಗೆ 22 ದಿನಗಳ ಕಾಲ ತಂಡ ಕಾರ್ಯಾಚರಣೆ ನಡೆಸಿದ್ದರು .
ಕೊನೆಗೂ ಸಿಕ್ಕಬಿದ್ದ ಕಳ್ಳರು: ಸತತ 22ದಿನಗಳಿಂದ ಕಣ್ಮರೆಯಾಗಿದ್ದ ಕಳ್ಳರು ಮಧ್ಯಪ್ರದೇಶ ರಾಜ್ಯದ ಸಾರಂಗಪುರದಲ್ಲಿ ಪೋಲಿಸರ ಬಲೆಗೆ ಬಿದ್ದಿದ್ದಾರೆ. ಲಾರಿ ಚಾಲಕ ರಜಾಕ್ ಖಾನ್ ಅಲಿಯಾಸ್ ಸಲೀಂ ಖಾನ್(65), ಥೇಜು ಸಿಂಗ್(42) ಹಾಗೂ ಅನೀಸ್ ಅಬ್ಬಾಸಿ(55)ರನ್ನು ಬಂಧಿಸಿ ರಾಜ್ಯಕ್ಕೆ ಕರೆ ತಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಕಳ್ಳರಿಂದ 1.17 ಕೋಟಿ ರೂ ಮೌಲ್ಯದ 24.500 ಕೆ.ಜಿ ತೂಕದ ಅಡಕೆ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ 25 ಲಕ್ಷ ಮೌಲ್ಯದ ಅಶೋಕ ಲೈಲ್ಯಾಂಡ್ 12 ಚಕ್ರದ ಲಾರಿ ಸೇರಿ ಒಟ್ಟು 1.42 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳ ಮೇಲೆ ಹಲವು ರಾಜ್ಯಗಳಲ್ಲಿ ದೂರು ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಡಿಕೆ ಎಲೆಚುಕ್ಕಿ ರೋಗ : ತೀರ್ಥಹಳ್ಳಿಗೆ ಕೇಂದ್ರ ವಿಜ್ಞಾನಿಗಳ ತಂಡ ಭೇಟಿ