ಶಿವಮೊಗ್ಗ: "ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಮಹಿಳೆಯರ ಕಿವಿ ಮೇಲೆ ಹೂವಿಡಲು ಹೊರಟಿದೆ. ಆದ್ರೆ, ಈಗಾಗಲೇ ಜನ ಗ್ಯಾರಂಟಿ ಕಾರ್ಡ್ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ತೀರ್ಥಹಳ್ಳಿಯಲ್ಲಿ ವಾಗ್ದಾಳಿ ನಡೆಸಿದರು.
ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡುತ್ತಾ, "ಕಾಂಗ್ರೆಸ್ ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿದೆ. ಇದಕ್ಕಾಗಿ ಸುಮಾರು 6 ಲಕ್ಷ ಕೋಟಿ ರೂ. ಬೇಕಾಗುತ್ತದೆ. ನಮ್ಮ ರಾಜ್ಯದ ಬಜೆಟ್ ಇರೋದೇ 3 ಲಕ್ಷ. ಇದರಿಂದ ಕಾಂಗ್ರೆಸ್ನವರು ಹೂವು ಇಡಲು ಮಹಿಳೆಯರ ಕಿವಿ ಮೇಲೆ ಜಾಗ ಇಲ್ಲ" ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು - ಮೈಸೂರು ರಸ್ತೆ ಕಾಮಗಾರಿ ಉದ್ಘಾಟನೆಗೆ ಬರುವ ಮುನ್ನಾ ಮಂಡ್ಯದ ರಸ್ತೆಗೆ ಹಾಕಿದ ಕಮಾನುಗಳ ಕುರಿತು ಮಾತನಾಡಿ, "ಉರಿಗೌಡ ಮತ್ತು ನಂಜೇಗೌಡರ ಮಹಾದ್ವಾರ ಹಾಕಿದಾಗ ಒಬ್ಬ ಒಕ್ಕಲಿಗನಾಗಿ ಹೆಮ್ಮೆ ಪಡಬೇಕಿತ್ತು. ಆದರೆ, ಡಿಜಿಪಿ ವಿರುದ್ಧವೇ ಎಫ್ ಐಆರ್ ದಾಖಲಿಸಲು ಹೇಳ್ತಾರೆ ಎಂದರೆ ಏನು?" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ರೈತರ ಉತ್ಪನ್ನಗಳಿಗೆ ಬೆಲೆ ಬರಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆ. ಈ ನಿಟ್ಟಿನಲ್ಲಿ ಮೋದಿ ಕಾರ್ಯ ತತ್ಪರರಾಗಿದ್ದಾರೆ. ಸಾಲದಿಂದ ಒದ್ದಾಡುತ್ತಿದ್ದ ರೈತರ ಪರವಾಗಿ ಬಿಜೆಪಿ ಸರ್ಕಾರ ನಿಂತಿದೆ. ಕಸ್ತೂರಿ ರಂಗನ್ ವರದಿ ಒಪ್ಪಲು ಸಾಧ್ಯವಿಲ್ಲ. ಕಸ್ತೂರಿ ರಂಗನ್ ಒನ್ ಮ್ಯಾನ್ ಆರ್ಮಿ ಇದ್ದಂತೆ. ಈ ಹಿಂದೆ ಯಡಿಯೂರಪ್ಪನವರು ವರದಿ ವಿರೋಧಿಸಿ ಪತ್ರ ಬರೆದಿದ್ದರು. ನಮ್ಮ ಸಿಎಂ ಬಸವರಾಜ ಬೊಮ್ಮಯಿ ಕೂಡ ಹೇಳಿಕೆ ನೀಡಿದ್ದಾರೆ. ನಾನು ಕೂಡ ಕಸ್ತೂರಿ ರಂಗನ್ ವರದಿ ಜಾರಿಯಾದ್ರೆ ರಕ್ತಪಾತ ಆಗುತ್ತದೆ ಎಂದು ದೆಹಲಿಗೆ ಹೋಗಿ ಹೇಳಿ ಬಂದಿದ್ದೇನೆ. ಬಹುಶಃ ಹಸಿರು ಪೀಠಕ್ಕೆ ನನ್ನ ಧ್ವನಿ ಕೇಳಿರಬೇಕು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ನಿವಾರಣೆ ಆಗುತ್ತದೆ. ಯಾರು ಹೆದರುವ ಅವಶ್ಯಕತೆ ಬೇಡ. 60 ವರ್ಷಗಳ ಸಮಸ್ಯೆಗೆ ಬಿಜೆಪಿ ತಿಲಾಂಜಲಿ ಇಡುತ್ತದೆ" ಎಂದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ ವಿಚಾರ... ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಆರಗ ಜ್ಞಾನೇಂದ್ರ
"ನಮ್ಮ ತೀರ್ಥಹಳ್ಳಿ ಕ್ಷೇತ್ರಕ್ಕೆ 3,450 ಕೋಟಿ ರೂ. ಬಂದಿದೆ. ಒಂದು ವರ್ಷ ಕುಮಾರಸ್ವಾಮಿ ಆಡಳಿತ, ಎರಡು ವರ್ಷ ಕೋವಿಡ್ನಿಂದ ಲಾಕ್ಡೌನ್ ಆದ್ರೂ ಸಹ ಉಳಿದೆರಡು ವರ್ಷದಲ್ಲಿ ದೊಡ್ಡ ಪ್ರಮಾಣದ ಹಣ ಬಂದಿದೆ. ಯಾರು ಏನೇ ಆಟ ಆಡಿದರೂ ಪ್ರಯೋಜನವಿಲ್ಲ. ಕಾಂಗ್ರೆಸ್ ನಾಟಕ ಎಲ್ಲರೂ ನೋಡಿಕೊಂಡು ಬಂದಿದ್ದಾರೆ" ಎಂದು ಕಿಡಿಕಾರಿದರು.
"ಕಾಂಗ್ರೆಸ್ ಸೋಲು ಅಂದ್ರೆ ಅದು ನೆಹರು ವಂಶದ ಸೋಲು, ಅವರ ಮಾನಸಿಕತೆಯ ಸೋಲು. ಇಲ್ಲಿನ ಕಾಂಗ್ರೆಸ್ನವರಿಗೆ ಜಿನ್ನಾ ಮಾನಸಿಕತೆ ಬೇಕು. ಆದರೆ, ಪಾಕಿಸ್ತಾನಕ್ಕೆ ಜಿನ್ನಾ ಬೇಡ. ತೀರ್ಥಹಳ್ಳಿಯ ಜನ ಬಾಂಬ್ ಇಡುವವರಿಗೆ ಜಾಗ ಕೊಡುವುದಿಲ್ಲ. ಬಾಂಬ್ ಇಡುವವರ ಪರವಾಗಿ ಮಾತನಾಡುವಾಗ ಯೋಚಿಸಬೇಕು. ದುರ್ದೈವ ಅಂದ್ರೆ, ತೀರ್ಥಹಳ್ಳಿಯಲ್ಲಿ ಬಾಂಬ್ ಟ್ರಯಲ್ ಬ್ಲಾಸ್ಟ್ ನಡೆದಿದೆ" ಎಂದರು.
ಈಶ್ವರಪ್ಪ ಅಸಮಾಧಾನ: ರೈತರ ಸಮಾವೇಶದಲ್ಲಿ ಈಶ್ವರಪ್ಪ ಭಾಷಣ ಮಾಡಲು ಪ್ರಾರಂಭಿಸುತ್ತಿದ್ದಂತೆ ಜನರು ಎದ್ದು ಹೋಗಲು ಆರಂಭಿಸಿದರು. ಇದರಿಂದ ಕೋಪಗೊಂಡ ಮಾಜಿ ಸಚಿವ, ಜನರ ವಿರುದ್ಧ ಅಸಮಾಧಾನಗೊಂಡರು. "ಎಲ್ಲರ ಮಾತು ಕೇಳಿದ್ದೀರಿ, ಕೇವಲ 10 ನಿಮಿಷ ನಮ್ಮ ಭಾಷಣ ಕೇಳಲು ಆಗುವುದಿಲ್ಲವಾ?" ಎಂದು ಅಸಮಾಧಾನ ಹೊರಹಾಕಿದರು. ಬಳಿಕ ಮಾತು ಮುಂದುವರೆಸಿ, "ಆರಗ ಜ್ಞಾನೇಂದ್ರ ಅವರು ಯಶಸ್ವಿ ಗೃಹ ಸಚಿವರು. ಆರ್ಟಿಕಲ್ 370 ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿತ್ತು. ಅದನ್ನು ಕಿತ್ತು ಹಾಕಲು ಬಿಜೆಪಿಯೇ ಬರಬೇಕಾಯಿತು. ಇಡೀ ದೇಶದ ಜನತೆ 2024 ಕ್ಕೆ ಅಯೋಧ್ಯೆಗೆ ಹೋಗ್ತಾರೆ, ಅಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನೋಡುತ್ತಾರೆ. ಮುಂದಿನ ವರ್ಷ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸುತ್ತೇವೆ" ಎಂದರು.