ಶಿವಮೊಗ್ಗ: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶರಣರ ಆ್ಯಂಜಿಯೋಗ್ರಾಂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ನಿರ್ದೇಶಕ ಡಾ.ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಮುರುಘಾ ಶ್ರೀಗಳನ್ನು ನಿನ್ನೆ ರಾತ್ರಿ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ವಿವಿಧ ಪರೀಕ್ಷೆಗಳನ್ನು ಕೈಗೊಂಡು ಇಂದು ಬೆಳಗ್ಗೆ ಶ್ರೀಗಳಿಗೆ ಆ್ಯಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಡಾ.ಪರಮೇಶ್ವರ್ ಹಾಗೂ ಡಾ. ಮಹೇಶ್ ಮೂರ್ತಿಯವರ ತಂಡ ಯಶಸ್ವಿಗಾಗಿ ಚಿಕಿತ್ಸೆ ನಡೆಸಿದೆ ಎಂದು ಹೇಳಿದರು.
ಶ್ರೀಗಳಿಗೆ ಬೆಳಗ್ಗೆ 10:45 ಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರನ್ನು ಸದ್ಯ ಐಸಿಯು ನಲ್ಲಿ ಇಡಲಾಗಿದೆ. ಮುಂದಿನ 24 ಗಂಟೆಗಳ ಕಾಲ ಅವರನ್ನು ನಿಗಾಘಟಕದಲ್ಲಿ ಇರಿಸಲಾಗುವುದು. ನಂತರ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಬೇಕಾ ಬೇಡವೇ ಎಂಬ ಬಗ್ಗೆ ವೈದ್ಯರ ತಂಡ ತೀರ್ಮಾನ ಮಾಡಲಿದೆ.
ಸದ್ಯ ಶ್ರೀಗಳ ಬಿಪಿ, ಸ್ಯಾಚುರೇಷನ್ ಎಲ್ಲಾವೂ ಸಾಮಾನ್ಯವಾಗಿದೆ. ಆಪರೇಷನ್ ಬಗ್ಗೆ ಮೊದಲು ಜೈಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆಪರೇಷನ್ ನಂತರ ಶ್ರೀಗಳ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಶ್ರೀಗಳ ಆರೋಗ್ಯದ ವರದಿಯನ್ನು ಚಿತ್ರದುರ್ಗದ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಿಮ್ಸ್ ನ ನಿರ್ದೇಶಕ ಡಾ ವಿರೂಪಾಕ್ಷಪ್ಪ ತಿಳಿಸಿದರು.
ನಂತರ ಮಾತನಾಡಿದ ಮೆಗ್ಗಾನ್ ಆಸ್ಪತ್ರೆಯ ಅಧಿಕ್ಷಕ ಡಾ.ಶ್ರೀಧರ್ ಅವರು, ಮುರುಘಾ ಶ್ರೀಗಳು ಆಸ್ಪತ್ರೆಗೆ ಬಂದ ತಕ್ಷಣ ನಮ್ಮ ಸಿಬ್ಬಂದಿ ಸಮಯವನ್ನು ವ್ಯರ್ಥ ಮಾಡದೆ, ಎಲ್ಲಾ ರೀತಿಯ ಪರೀಕ್ಷೆ ನಡೆಸಿದರು. ನಂತರ ಅವರಿಗೆ ಆಪರೇಷನ್ ನಡೆಸಲಾಯಿತು. ಸದ್ಯ ಅವರು ಆರೋಗ್ಯವಾಗಿದ್ದು, ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಮುಂದಿನ 24 ಗಂಟೆಗಳ ನಂತರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಮುರುಘಾ ಶ್ರೀಗೆ ಹೃದಯ ಸಮಸ್ಯೆ : ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್