ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಕೆಳದಿ ಅರಸರ ಕೊಡುಗೆ ಅಪಾರ. ಇವರ ಆಡಳಿತದ ಅವಧಿಯಲ್ಲಿ ನಿರ್ಮಿಸಿದ ಪ್ರತಿಯೊಂದು ಕಟ್ಟಡ, ಶಿಲ್ಪಕಲೆ ಇಂದಿಗೂ ಜೀವಂತವಾಗಿವೆ. ಇಂತಹ ಅಪರೂಪದ ಕೆಲಸಗಳಲ್ಲಿ ಚಂಪಕ ಸರಸು ಸಹ ಒಂದು.
ಹೌದು, ಚಂಪಕ ಸರಸು ಸಾಗರ ತಾಲೂಕಿನ ಆನಂದಪುರ ಬಳಿಯ ಮಲ್ಲಂದೂರು ಗ್ರಾಮದಲ್ಲಿ ಇದೆ. ಈ ಚಂಪಕ ಸರಸುವನ್ನು ಕೆಳದಿಯ ಪ್ರಸಿದ್ಧ ಅರಸರುಗಳಲ್ಲಿ ಒಬ್ಬರಾದ ರಾಜ ವೆಂಕಟಪ್ಪ ನಾಯಕ ನಿರ್ಮಿಸಿದರು. ಸುಮಾರು 450 ವರ್ಷಗಳ ಹಿಂದೆ ನಿರ್ಮಿತವಾದ ಚಂಪಕ ಸರಸು ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಮಲ್ಲಂದೂರು ಗ್ರಾಮದ ಹೊರ ಭಾಗದಲ್ಲಿ ಚೌಕಕಾರದಲ್ಲಿ ನಿರ್ಮಿಸಿರುವ ಒಂದು ಸುಂದರ ಕೊಳ. ಚೌಕಕಾರದಲ್ಲಿ ನಿರ್ಮಿತವಾಗ ಕೊಳದ ತುಂಬಾ ನೀರು ಇದ್ದು, ಮಧ್ಯ ಭಾಗದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
ಚಂಪಕ ಸರಸು ಇತಿಹಾಸ: ಚಂಪಕ ಸರಸು ಅನ್ನು ರಾಜ ವಂಕಟಪ್ಪ ನಾಯಕ ನಿರ್ಮಿಸಿದರು ಎಂಬ ಮಾಹಿತಿ ಲಭ್ಯವಿದೆ. ಅಂದು ಕಾಡಿನ ಮಧ್ಯ ಭಾಗದಲ್ಲಿ ನೈಸರ್ಗಿಕವಾಗಿ ಹರಿದು ಬರುವ ನೀರನ್ನು ಸೆರೆ ಹಿಡಿದು ನಿರ್ಮಿಸಿದ ಸುಂದರ ಕೊಳವೇ ಚಂಪಕ ಸರಸು. ಇದು ಸುಮಾರು 200 ಅಡಿ ಉದ್ದ, 200 ಅಡಿ ಅಗಲವಿದೆ. ಈ ಕೊಳ ಸುಮಾರು 50 ಅಡಿ ಅಳವಿದ್ದು, ನಡುವೆ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ. ಕೊಳದ ಉತ್ತರ ಭಾಗದಿಂದ ನಂದಿ ಬಾಯಿಯಿಂದ ನೀರು ಬರುತ್ತದೆ. ದಕ್ಷಿಣ ಭಾಗದಿಂದ ನೀರು ಹೊರ ಹೋಗುವ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಜೀರ್ಣೋದ್ದಾರವಾದ ಚಂಪಕ ಸರಸ್ಸು ಲೋಕಾರ್ಪಣೆ : ರಾಕಿಂಗ್ ಸ್ಟಾರ್ ಯಶ್‌ರ ಯಶೋ ಮಾರ್ಗದಿಂದ ಪುನಶ್ಚೇತನ
ಕೊಳದಿಂದ ಹೊರ ಹೋಗುವ ನೀರಿಗೂ ಸಹ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನೀರು ಹೊರ ಹೋಗಲು ತಾಮ್ರದ ಪೈಪ್ಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಇಲ್ಲೇ ಸ್ಥಳೀಯವಾಗಿ ದೊರೆಯುವ ಜಂಬು ಇಟ್ಟಿಗೆಯಿಂದ ಚಂಪಕ ಸರಸು ನಿರ್ಮಿಸಲಾಗಿದ್ದು, ಇಟ್ಟಿಗೆಯು ಸುಮಾರು 4 ಅಡಿ ಅಗಲ, 4 ಅಡಿ ಉದ್ದ ಇವೆ. ಜೊತೆಗೆ ಸುತ್ತಲು ಕಲ್ಲಿನಿಂದ ನಿರ್ಮಿತವಾಗಿವೆ. ಈ ಕಲ್ಲಿನ ಮೇಲೆ ಅನೇಕ ಚಿತ್ತಾರಗಳಿವೆ. ಸರಸುವಿಗೆ ಪ್ರವೇಶ ಪಡೆಯುವಲ್ಲಿ ಎರಡು ಬೃಹತ್ ಗಾತ್ರದ ಆನೆಯ ಕೆತ್ತನೆಗಳು ಮನಮೋಹಕವಾಗಿವೆ.
ನಿರ್ಮಾಣದ ಹಿಂದಿದೆ ಇನ್ನೊಂದು ಕಥೆ: ರಾಜ ವೆಂಕಟಪ್ಪ ನಾಯಕ ತನ್ನ ಸೇನೆಯ ಜೊತೆ ನಾಡಿನ ಪ್ರವಾಸ ಮಾಡುವಾಗ ಈ ಜಾಗದಲ್ಲಿ ಸುಂದರ ಯುವತಿಯೊಬ್ಬಳು ಪ್ರತಿ ನಿತ್ಯ ಇಲ್ಲಿನ ಮಹಾಂತೇಶ ಮಠದ ಮುಂದೆ ರಂಗೋಲಿ ಹಾಕಿ ಹೋಗುತ್ತಿದ್ದಳಂತೆ. ಆಕೆಯ ರಂಗೋಲಿಗೆ ಮನಸೋತ ವೆಂಕಪಟಪ್ಪ ನಾಯಕ ಆಕೆಯನ್ನು ಕಂಡು ಆವಳನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ. ಆದರೆ, ಈಕೆ ಬೆಸ್ತ ಕುಲದ ಹುಡುಗಿಯಾದ ಕಾರಣ ಮದುವೆಗೆ ವಿರೋಧ ವ್ಯಕ್ತವಾಗುತ್ತದೆ. ನಂತರ ಈಕೆಯ ಸವಿ ನೆನಪಿಗಾಗಿ ಸರಸುವನ್ನು ನಿರ್ಮಾಣ ಮಾಡಿದರು ಎನ್ನಲಾಗುತ್ತದೆ. ಅಲ್ಲದೇ, ಇಲ್ಲಿ ಹೆಚ್ಚು ಸಂಪಿಗೆ ಮರಗಳು ಇದ್ದ ಕಾರಣ ಚಂಪಕ ಸರಸು ಎಂದು ಹೆಸರು ಬಂದಿದೆ.
ಇದನ್ನೂ ಓದಿ: ಕೆಳದಿ ಚೆನ್ನಮ್ಮಾಜೀ ಏಟಿಗೆ ನುಚ್ಚುನೂರಾಗಿ ಓಡಿಹೋದ ಔರಂಗಜೇಬನ ಸೈನ್ಯ : ಬಿ ವೈ ರಾಘವೇಂದ್ರ
ಅರಸರ ಅಳ್ವಿಕೆ ಮುಗಿದ ನಂತರ ಇದು ಪಾಳು ಬಿದ್ದ ಜಾಗವಾಗಿತ್ತು. ಇಲ್ಲಿ ಅನೇಕ ಗಿಡಗಳು ಬೆಳೆದು ಯಾರು ಓಡಾಡದ ಸ್ಥಿತಿಯಲ್ಲಿತ್ತು. ನಂತರ ಇದು ಸುಸೈಡ್ ಸ್ಪಾಟ್ ಕೂಡ ಆಗಿತ್ತು. ಇಲ್ಲಿಗೆ ಬಂದು ಕೊಳದಲ್ಲಿ ಬಿದ್ದು ಅನೇಕರು ಸಾವನ್ನಪ್ಪಿದ್ದಾರೆ. ಇಂತಹ ತಾಣವನ್ನು ಆನಂದಪುರ ಕನ್ನಡ ಸಂಘ ಹಾಗೂ ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ನವರು ತಮ್ಮ ಕೈಲಾದಂತೆ ಸಂರಕ್ಷಣೆ ಮಾಡಿಕೊಂಡು, ಜನರು ಇಲ್ಲಿಗೆ ಬಂದು ಹೋಗುವಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಯಶೋ ಮಾರ್ಗದಿಂದ ಅಭಿವೃದ್ಧಿ: ಚಂಪಕ ಸರಸು ನೀರಿನ ಆಸರೆಯುಳ್ಳ ಕೊಳವಾಗಿದೆ. ನೀರಿನ ಮೂಲಗಳಾದ ಕೆರೆ, ಕೊಳಗಳನ್ನು ಸಂರಕ್ಷಣೆ ಮಾಡುವ ಧೈಯೋದ್ದೇಶ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಅವರ ಯಶೋ ಮಾರ್ಗದ ಮೂಲಕ ಕೊಳ ಅಭಿವೃದ್ಧಿಪಡಿಸಲಾಗಿದೆ. ಸುಮಾರು 7 ತಿಂಗಳ ಕಾಲ ಜೀರ್ಣೋದ್ಧಾರ ಮಾಡಲಾಗಿದೆ.
ಚಂಪಕ ಸರಸು ಸುತ್ತ ಇರುವ ಗೋಡೆಗಳ ಮೇಲೆ ಕಾಡು ಗಿಡಗಳು ಬೆಳೆದಿದ್ದವು. ಅದರ ಬೇರುಗಳು ಇಟ್ಟಿಗೆಯ ಮೂಲ ಸ್ವರೂಪವನ್ನು ಹಾಳು ಮಾಡಿದ್ದವು. ಇದೀಗ ಗಿಡಗಳನ್ನು ತೆರವು ಮಾಡಲಾಗಿದೆ. ಅಲ್ಲದೇ, ಸುತ್ತಲು ಬಿರುಕು ಬಿಟ್ಟಿದ್ದ ಗೋಡೆಗಳನ್ನು ಮರು ನಿರ್ಮಾಣ ಮಾಡಲಾಗಿದೆ. ಮೂಲ ರೂಪಕ್ಕೆ ಧಕ್ಕೆ ಬಾರದಂತೆ ಬಿದ್ದ ಮಣ್ಣಿನಿಂದಲೇ ಗೋಡೆಗಳನ್ನು ನಿರ್ಮಿಸಲಾಗಿದೆ. ಬಿದ್ದಿದ್ದ ಕೆತ್ತನೆಯ ಕಲ್ಲುಗಳನ್ನು ಮರು ಜೋಡಿಸಲಾಗಿದೆ. ಚಂಪಕ ಸರಸು ಮುಂಭಾಗದಲ್ಲಿ ಒಂದು ದ್ವಾರವನ್ನು, ಮಹಾನವಮಿ ದಿಬ್ಬವನ್ನು ನಿರ್ಮಿಸಲಾಗಿದೆ. ಶೌಚಾಲಯ, ಕಾವಲುಗಾರರ ಕೊಠಡಿ ನಿರ್ಮಿಸಿರುವ ಜೊತೆಗೆ ಮಹಾಂತೇಶ ಮಠದ ಮೇಲ್ಚಾವಣಿಯನ್ನು ತೆಗೆದು ಮರು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಚೆನ್ನಮ್ಮ ಕಾಲದ 2 ಶಾಸನಗಳು ಪತ್ತೆ!
ಚಂಪಕ ಸರಸುಗೆ ಬೇಕಿದೆ ಇನ್ನಷ್ಟು ಕಾಯಕಲ್ಪ: ಚಂಪಕ ಸರಸು ಅನ್ನು ಯಶೋ ಮಾರ್ಗದವರು ತಮ್ಮ ಪರಿಮಿತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಆದರೆ, ಇಲ್ಲಿ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ಮೊದಲನೇಯದಾಗಿ, ಚಂಪಕ ಸರಸುವಿನ ನೀರನ್ನು ಹೊರಗೆ ಹಾಕಿ ಹೊಸ ನೀರು ಬರುವಂತೆ ಮಾಡಬೇಕು. ನೀರು ನಿಂತಲ್ಲೇ ನಿಂತ ಕಾರಣ ಹಸಿರು ಬಣ್ಣಕ್ಕೆ ತಿರುಗಿದ್ದು, ಹೊರಗೆ ಹಾಕಬೇಕಿದೆ. ಕೊಳಕ್ಕೆ ಬರುವ ನೀರಿನ ಮೂಲವನ್ನು ಸರಿ ಪಡಿಸಬೇಕಿದೆ. ಇಲ್ಲಿಗೆ ಬರುವ ದಾರಿಯನ್ನು ಸರಿಪಡಿಸಬೇಕಿದೆ. ಜೊತೆಗೆ ಕೊಳದ ಸುತ್ತಮುತ್ತಲಿನ ಜಾಗ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಬಿಡಿಸಿಕೊಳ್ಳಬೇಕಿದೆ. ಚಂಪಕ ಸರಸುವನ್ನು ಪುರತಾತ್ವ ಇಲಾಖೆ, ರಾಜ್ಯ ಸರ್ಕಾರ ಪಡೆದು ಇನ್ನಷ್ಟು ಅಭಿವೃದ್ಧಿಪಡಿಸಿ ಒಂದು ಪ್ರವಾಸೋದ್ಯಮ ಸ್ಥಳವನ್ನಾಗಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.