ಶಿವಮೊಗ್ಗ: ನಗರದ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಗುಂಡಿಗಳನ್ನು ಮುಚ್ಚಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿ ರಸ್ತೆಯಲ್ಲಿ ಮೀನು ಹಿಡಿದು ವಿದ್ಯಾರ್ಥಿ ಸಂಘಟನೆ ವಿನೂತನ ರೀತಿ ಪ್ರತಿಭಟನೆ ನಡೆಸಿತು.
ನಗರದ ಪಾರ್ಕ್ ಬಡಾವಣೆಯ ಮುಖ್ಯ ರಸ್ತೆಯಲ್ಲಿನ ಗುಂಡಿಗಳಲ್ಲಿ ಮೀನು ಬಿಟ್ಟು ಅದನ್ನು ಹಿಡಿಯುವ ಮೂಲಕ ಸರ್ಕಾರಕ್ಕೆ ರಸ್ತೆ ರಿಪೇರಿ ಮಾಡುವಂತೆ ಆಗ್ರಹಿಸಲಾಯಿತು.ಅಭಿವೃದ್ದಿಯ ಹರಿಕಾರ ಎಂದು ಹೇಳಿ ಕೊಳ್ಳುವ ಸಿಎಂ ಯಡಿಯೂರಪ್ಪನವರು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ರು.
ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ದಿ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ರಾಜಕಾರಣಿಗಳಿಗೆ ಅಣಕ ಮಾಡುವ ದೃಷ್ಟಿಯಿಂದ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತು. ಗುಂಡಿಯಲ್ಲಿ ಮೀನನ್ನು ಬಿಟ್ಟು ಗಾಳ ಹಾಕಿ ಮೀನನ್ನು ಹಿಡಿಯುವ ಮೂಲಕ ರಾಜ್ಯ ಸರ್ಕಾರಕ್ಕೆ ಅಣಕ ಮಾಡಲಾಯಿತು.
ಅಲ್ಲದೆ ಗುಂಡಿ ಇರುವ ಕಡೆ ಭತ್ತದ ಸಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಗುಂಡಿ ಇರುವ ಕಡೆ ಸಿಎಂ, ಈಶ್ಚರಪ್ಪ ಹಾಗೂ ಸಂಸದರು ಈಜಾಡುವ ಸ್ಥಳ ಎಂದು ಬೋರ್ಡ್ ಹಾಕಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೆ, ರಸ್ತೆ ಸರಿಪಡಿಸಿ ಎಂದು ಸಿಎಂಗೆ ರಕ್ತದಲ್ಲಿಯೇ ಪತ್ರ ಬರೆಯಲಾಯಿತು.