ಶಿವಮೊಗ್ಗ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಒತ್ತಾಯದ ಮೇರೆಗೆ ಕಾಶ್ಮೀರಕ್ಕೆ ಸಂವಿಧಾನ 370 ವಿಧಿ ನೀಡಲಾಗಿತ್ತು. ಆದ್ರೆ ಈ ಪ್ರಾತಿನಿಧ್ಯ ನೀಡಲು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ನಿರಾಕರಿಸಿದ್ದರು ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಹೇಳಿದ್ದಾರೆ.
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆದ ಬಿಜೆಪಿಯ 'ಒಂದು ದೇಶ, ಒಂದು ಸಂವಿಧಾನ'ದ ಸಭೆಯಲ್ಲಿ ಮಾತನಾಡಿದ ಡಿ.ಹೆಚ್.ಶಂಕರಮೂರ್ತಿ, ಕಾಶ್ಮೀರಕ್ಕೆ 370 ನೇ ವಿಧಿ ನೀಡುವ ಕುರಿತ ವಿಚಾರವನ್ನು ಅಂಬೇಡ್ಕರ್ ಲೋಕಸಭೆಗೆ ಬರದಂತೆ ನೋಡಿಕೊಂಡರು ಎಂದರು.
ನಂತರ 1954 ರಲ್ಲಿ ಆಗಿನ ರಾಷ್ಟ್ರಪತಿ ಕಾಶ್ಮೀರಕ್ಕೆ 35 (ಎ) ಕೊಡಿಸಿದರು. ಕಳೆದ ಆಗಸ್ಟ್ 5ರ ತನಕ ಕಾಶ್ಮೀರದ ಸಿಎಂ ಕಾಶ್ಮೀರದ ಪ್ರಧಾನ ಮಂತ್ರಿಯಾಗಿದ್ದರು. ಅದರಂತೆ ಅಲ್ಲಿಗೆ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನವಿತ್ತು. ಕಾಶ್ಮೀರ ನಮ್ಮ ದೇಶದ ಕೀರಿಟ, ಅವಿಭಾಜ್ಯ ಅಂಗವಾಗಿದೆ ತಿಳಿಸಿದರು.
ಅಂದು ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಕಾಶ್ಮೀರಕ್ಕೆ ಇರುವ 370 ವಿಧಿ ರದ್ದು ಮಾಡುವುದಾಗಿ ಹೇಳಿದ್ದರು. ನಮ್ಮ ಪ್ರತಿ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಹೇಳುತ್ತಲೇ ಬಂದಿದ್ದೇವೆ. ಈಗ ಅದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದನದಲ್ಲಿ ಮಂಡನೆ ಮಾಡಿ ಕಾಶ್ಮೀರವನ್ನು ಭಾರತದ ಒಂದು ರಾಜ್ಯವನ್ನಾಗಿ ಮಾಡಿದ್ದಾರೆ ಎಂದರು.
ಸಭೆಯಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಎಸ್.ರುದ್ರೇಗೌಡ, ಸಂಸದ ಬಿ.ವೈ.ರಾಘವೇಂದ್ರ, ಉಪ ಮೇಯರ್ ಚನ್ನ ಬಸಪ್ಪ, ಭಾನುಪ್ರಕಾಶ್ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.