ಶಿವಮೊಗ್ಗ: ನೆರೆ ಮನೆಯವರು ತಮ್ಮ ಕೋಳಿಗೆ ವಿಷ ಹಾಕಿ ಕೊಂದಿದ್ದಾರೆ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಇಲ್ಲಿನ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬರೂರು ಗ್ರಾಮದ ಈರೇಶ್ ಕುಮಾರ್ ಎಂಬುವವರು, ತಮ್ಮ ಕೋಳಿಗಳಿಗೆ ಜಗದೀಶ್ ಎಂಬಾತ ವಿಷ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈರೇಶ್ ಕುಮಾರ್ ಹತ್ತಾರು ನಾಟಿ ಹಾಗೂ ಗಿರಿರಾಜ ಕೋಳಿಗಳನ್ನು ತಮ್ಮ ಮನೆಯಲ್ಲಿ ಸಾಕಿಕೊಂಡಿದ್ದಾರೆ. ಆದರೆ ದಿಢೀರನೆ ಒಂದು ಕೋಳಿ ಅಸ್ವಸ್ಥವಾಗಿ ಬಿದ್ದಿದೆ. ಈರೇಶ್ ಕುಟುಂಬದವರು ಈ ಕೋಳಿ ಕೊಯ್ದು ಅಡುಗೆಗೆ ರೆಡಿ ಮಾಡುವಷ್ಟರಲ್ಲಿ ಮತ್ತೆ ನಾಲ್ಕು ಕೋಳಿಗಳು ಸತ್ತು ಹೋಗಿವೆ. ನಂತರ ಮನೆ ಸುತ್ತ ಪರಿಶೀಲಿಸಿದಾಗ ಅಕ್ಕಿಗೆ ವಿಷ ಬೆರೆಸಿ ಕೋಳಿಗಳಿಗೆ ಹಾಕಿರುವುದು ತಿಳಿದು ಬಂದಿದೆ.
ಈರೇಶ್ ಕುಮಾರ್ ಹಾಗೂ ಪಕ್ಕದ ಮನೆಯ ಜಗದೀಶ್ ಅವರಿಗೆ ಹಿಂದಿನಿಂದಲೂ ಮನೆ ಬೇಲಿಯ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಜಗದೀಶ್ ನಮ್ಮ ಕುಟುಂಬದವರನ್ನು ಸಾಯಿಸುವ ಉದ್ದೇಶದಿಂದ ಕೋಳಿಗಳಿಗೆ ವಿಷ ಹಾಕಿ ಸಾಯಿಸಿದ್ದಾರೆ ಎಂದು ಈರೇಶ್ ಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭಟ್ಕಳದಲ್ಲಿ ಎನ್ಐಎ ದಾಳಿ: ವ್ಯಕ್ತಿ ವಶಕ್ಕೆ ಪಡೆದ ಅಧಿಕಾರಿಗಳು