ಶಿವಮೊಗ್ಗ: ಶಾಲೆಯ ವಿದ್ಯಾರ್ಥಿನಿಗೆ ಶಿಕ್ಷಕರೊರ್ವರು ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿ ಪೋಷಕರು ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹೊಸನಗರ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಅದೇ ಶಾಲೆಯ ಶಿಕ್ಷಕರೊಬ್ಬರು ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಈ ವಿಚಾರವನ್ನು ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಮೊಟ್ಟೆ ತಿಂದ ವಿದ್ಯಾರ್ಥಿನಿಯು ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ ಎಂದು ಆಕೆಯ ಪೋಷಕರು ಹೇಳಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ತಮ್ಮ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಡಿಡಿಪಿಐ ಅವರಿಗೆ ಪತ್ರ ಬರೆದು ಮೊಟ್ಟೆ ತಿನ್ನಿಸಿದ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಎಲ್ಲಾರಿಗೂ ಅವರದ್ದೇ ಆದ ಆಹಾರ ಪದ್ಧತಿ ಇರುತ್ತದೆ. ಆದರೇ ತಮ್ಮ ಮಗಳು ಓದುತ್ತಿರುವ ಶಾಲೆಯ ಶಿಕ್ಷಕರು ಮೊಟ್ಟೆಯನ್ನು ತಿಂದರೆ ಏನೆಲ್ಲಾ ಪ್ರಯೋಜನವಿದೆ ಎಂದು ತರಗತಿಯಲ್ಲಿ ತಿಳಿಸಿದ್ದಾರೆ. ನಂತರ ಮೊಟ್ಟೆಯನ್ನು ತಿನ್ನದ ವಿದ್ಯಾರ್ಥಿನಿಗೆ ಒತ್ತಾಯ ಪೂರ್ವಕವಾಗಿ ತಿನ್ನಿಸಿದ್ದಾರೆ.
ವಿದ್ಯಾರ್ಥಿನಿ ತಂದೆ ಹೇಳಿಕೆ: ಘಟನೆ ಬಗ್ಗೆ ವಿದ್ಯಾರ್ಥಿನಿ ತಂದೆ ಪ್ರತಿಕ್ರಿಯೆ ನೀಡಿದ್ದು, ಕಳೆದ ಒಂದು ವಾರದಿಂದ ನನ್ನ ಮಗಳು ಮನೆಗೆ ಬಂದು ಒಬ್ರು ಟೀಚರ್ ಇಡೀ ಕ್ಲಾಸಿನಲ್ಲಿರುವ ಎಲ್ಲಾ ಮಕ್ಕಳು ಮೊಟ್ಟೆ ತಿನ್ನಲೇಬೇಕು ಎಂದು ಒತ್ತಾಯ ಮಾಡುತ್ತಿರುವುದಾಗಿ ತಿಳಿಸಿದ್ದಳು. ಮೊಟ್ಟೆ ತಿನ್ನಲು ಬಯಸದವರಿಗೆ ಹೇಳಿರಲ್ಲ ಎಂದು ನಾನು ಭಾವಿಸಿ ಸುಮ್ಮನಾಗಿದ್ದೆ. ಆದರೇ ಎಲ್ಲಾ ಮಕ್ಕಳಿಗೂ ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಲೇಬೇಕು ಎಂದು ತಿನ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಬಳಿಕ ಈ ವಿಚಾರವನ್ನು ತನ್ನ ತಾಯಿಯೊಂದಿಗೆ ಮಗಳು ಹೇಳಿಕೊಂಡಿದ್ದಾಳೆ. ಅಲ್ಲದೇ ನಡೆದ ಘಟನೆಯಿಂದ ಭಯಭೀತಳಾಗಿದ್ದಾಳೆ. ಈ ಬಗ್ಗೆ ಉಳಿದ ಮಕ್ಕಳ ಬಳಿ ವಿಚಾರಿಸಿದಾಗ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಈ ವಿಷಯವನ್ನು ಮನೆಯವರಿಗೆ ತಿಳಿಸದಂತೆ ಬೆದರಿಕೆ ಹಾಕಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಈ ಕುರಿತು ದೂರು ನೀಡಲಾಗಿದೆ ಎಂದು ವಿದ್ಯಾರ್ಥಿನಿ ತಂದೆ ಹೇಳಿದ್ದಾರೆ.
ಈ ಕುರಿತು ಈಟಿವಿ ಭಾರತ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಮೂರ್ತಿ ಅವರು, ಗರ್ತಿಕೆರೆ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಿಸಿದ ವಿಚಾರ ಹಾಗೂ ಪತ್ರ ಬರೆದಿರುವ ವಿಚಾರ ನನ್ನ ಗಮನಕ್ಕೆ ಶಾಲೆಯ ಮುಖ್ಯ ಶಿಕ್ಷಕರು ತಂದಿದ್ದಾರೆ. ಈಗಾಗಲೇ ಶಾಲಾ ಹಂತದಲ್ಲಿ ವಿಚಾರಣೆ ನಡೆದಿದೆ. ಈ ಕುರಿತು ನಾನು ಡಿಡಿಪಿಐ ಅವರ ಗಮನಕ್ಕ ತಂದಿದ್ದೇನೆ. ಇಲಾಖಾ ಹಂತದಲ್ಲೂ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಸೋಮಣ್ಣರಿಂದ ಆಹ್ವಾನ: ನಾನು, ರಾಜಣ್ಣ ಹೋಗುತ್ತಿದ್ದೇವೆ ಎಂದ ಸಚಿವ ಪರಮೇಶ್ವರ್