ಶಿವಮೊಗ್ಗ: ನಾಳಿನ ಮತ ಎಣಿಕೆಗೆ ಎಲ್ಲ ರೀತಿಯ ತಯಾರಿ ನಡೆದಿದೆ. ಎಲ್ಲ ಏಳು ಕ್ಷೇತ್ರದ ಸ್ಟ್ರಾಂಗ್ ರೂಂಗೆ ಮತಯಂತ್ರ ಬಂದು ಸೇರಿವೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸೆಲ್ವಮಣಿ ತಿಳಿಸಿದ್ದಾರೆ. ಮತ ಎಣಿಕೆಗಾಗಿ ಎಲ್ಲ ಸಿದ್ಧತೆ ನಡೆದಿದೆ. ಪ್ರತಿ ಕ್ಷೇತ್ರಕ್ಕೂ 14 ಟೇಬಲ್ಗಳಂತೆ 129 ಟೇಬಲ್ ಹಾಕಲಾಗಿದೆ. ಮತ್ತೆ ಅಂಚೆ ಮತ ಎಣಿಕೆಗೆ 3 ಟೇಬಲ್ಗಳನ್ನು ಹಾಕಲಾಗಿದೆ. ಏಳು ಮತ ಕ್ಷೇತ್ರಕ್ಕೆ ಪ್ರತ್ಯೇಕ ಚುನಾವಣಾ ವೀಕ್ಷಕರು ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದರು.
5 ಗಂಟೆಗೆ ನಮ್ಮ ಸಿಬ್ಬಂದಿ ಬಂದು ತಮ್ಮ ತಮ್ಮ ಕೆಲಸ ಪ್ರಾರಂಭಿಸಿಕೊಳ್ಳುತ್ತಾರೆ. ನಾಳೆಯ ಮತ ಎಣಿಕೆಗೆ ಒಟ್ಟು ಒಂದು ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದೆ. ಒಂದು ಟೇಬಲ್ಗೆ ಒಂದು ಪಾರ್ಟಿಯಿಂದ ಒಬ್ಬರು ಅಗಮಿಸಬಹುದು. ಪ್ರತಿ ಸ್ಟ್ರಾಂಗ್ ರೂಂ ಅನ್ನು ಅಭ್ಯರ್ಥಿಗಳ ಮುಂದೆ ತೆರೆಯಲಾಗುವುದು ಎಂದರು. ಇದೇ ಡಿಸಿ, ಎಸ್ಪಿ ಅವರು ಚುನಾವಣಾ ವೀಕ್ಷಕರ ಜೊತೆ ಮತ ಎಣಿಕೆಯ ಕೊಠಡಿ ವೀಕ್ಷಿಸಿದರು.
ನಾಳೆಯ ಮತ ಎಣಿಕೆ ಕೇಂದ್ರದ ಸುತ್ತ ಮೂರು ಸುತ್ತಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮೊದಲನೆಯದಾಗಿ ಸಿಪಿಎಫ್, ರಾಜ್ಯ ಭದ್ರತಾ ಪಡೆ ಹಾಗೂ ಮೂರನೇಯದಾಗಿ ಸ್ಥಳೀಯ ಪೊಲೀಸರು ಇರುತ್ತಾರೆ ಎಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಮತ ಎಣಿಕ ಕೇಂದ್ರದ ಭದ್ರತೆಗೆ 450 ಜನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲ ಮತ ಎಣಿಕೆ ಕೊಠಡಿಗಳ ಬಳಿಯೂ ಸೂಕ್ತ ಭದ್ರತೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ನಾಳೆ ಮತ ಎಣಿಕೆಗೆ ಬರುವವರಿಗೆ, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಪಾಸ್ ನೀಡಲಾಗಿದೆ. ಯಾರಿಗೆ ಪಾಸ್ ನೀಡಲಾಗಿದೆಯೂ ಅವರಿಗೆ ಬರುವ ಅವಕಾಶ ನೀಡಲಾಗಿದೆ. ನಾಳೆ ಮತ ಎಣಿಕಾ ಕೇಂದ್ರಕ್ಕೆ ಬರುವವರು ಬ್ಯಾಗ್ ಮೊಬೈಲ್ಗಳನ್ನು ತರುವಂತಿಲ್ಲ. ಹಾಗೆನಾದ್ರು ತಂದರೆ ಅವುಗಳನ್ನು ವಶಕ್ಕೆ ಪಡೆಯಲಾಗುವುದು. ನಗರದ ಇತರೆ ಕಡೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಹೆಚ್ಚಿನ ಗಸ್ತಿನ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ 144 ಸೆಕ್ಷನ್ ಇರುವ ಕಾರಣ ಮೆರವಣಿಗೆ, ಸಂಭ್ರಮಾಚರಣೆಗಳಿಗೆ ಅವಕಾಶವಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ಭದ್ರಾವತಿ ಹಾಗೂ ಬಿಆರ್ಪಿ ಕಡೆಯಿಂದ ಬರುವ ವಾಹನಗಳು ಬೈಪಾಸ್ ರಸ್ತೆಯ ಮೂಲಕ ತೆರಳುವುದು. ಚನ್ನಗಿರಿ ಮಾರ್ಗವಾಗಿ ಬರುವ ವಾಹನಗಳು ತುಂಗಾ ಸೇತುವೆ ಮೂಲಕ ನಗರವನ್ನು ಪ್ರವೇಶ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಹೊಸ ಸರ್ಕಾರಕ್ಕೆ 2 ದಿನ ಬಾಕಿ; ಬಿಗಿ ಬಂದೋಬಸ್ತ್ನಲ್ಲಿ ನಡೆಯಲಿದೆ ಮತ ಎಣಿಕೆ