ಶಿವಮೊಗ್ಗ: ''ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.
ಇಂದು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ''ನಾನು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಆಯಾ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡುತ್ತೇನೆ. ಬಳಿಕ ಬೂತ್ ಕಾರ್ಯಕರ್ತರ ಮನೆಗೆ ಭೇಟಿ ಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಯಾವಾಗಲೂ ಸಮಯಕ್ಕೆ ಸರಿಯಾಗಿ ಭೇಟಿ ನೀಡುವುದು ಮುಖ್ಯವಾಗುತ್ತದೆ. ನನ್ನನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ವೇದಿಕೆಯಲ್ಲಿ ಇರುವ ಮಖಂಡರಂತೆ ವೇದಿಕೆ ಮುಂಭಾಗ ಇರುವ ಕಾರ್ಯಕರ್ತರು ಸಹ ಮುಖ್ಯವಾಗಿದ್ದಾರೆ. ನಾವೆಲ್ಲಾ ಸೇರಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚೆನ್ನಾಗಿ ಕೆಲಸ ಮಾಡಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ'' ಎಂದು ಹೇಳಿದರು.
ಇದಕ್ಕೂ ಬಿಜೆಪಿ ಕಾರ್ಯಕರ್ತರು ಕುವೆಂಪು ರಸ್ತೆಯಲ್ಲಿ ಬಿ. ವೈ. ವಿಜಯೇಂದ್ರ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದರು. ಮಹಿಳಾ ಕಾರ್ಯಕರ್ತರು ಆರತಿ ಬೆಳಗಿ ಹಣೆಗೆ ತಿಲಕ ಇಟ್ಟರು. ಮಂಗಳ ವಾದ್ಯಗಳೂಂದಿಗೆ ಪಕ್ಷದ ಕಚೇರಿಯವರೆಗೂ ಸ್ವಾಗತ ಕೋರಿದರು. ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯೇಂದ್ರ ಅವರು ಮೊದಲು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ನಂತರ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರು ಹಾರ ಶಾಲು ಹಾಕಿ ಸ್ವಾಗತಿಸಿದರು.
ಮಾಜಿ ಸಚಿವ ಈಶ್ವರಪ್ಪ ಮನೆಗೆ ಭೇಟಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಬಿಜೆಪಿ ಕಾರ್ಯಾಲಯ ಭೇಟಿಯ ನಂತರ ಮತ್ತೂರಿಗೆ ತೆರಳಿದರು. ಇಲ್ಲಿ ಆರ್ಎಸ್ಎಸ್ನ ಪ್ರಮುಖರಾದ ಪಟ್ಟಾಭಿ ಅವರ ಮನೆಗೆ ಭೇಟಿ ನೀಡಿದರು. ನಂತರ ಮಲ್ಲೇಶ್ವರ ನಗರದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮನೆಗೆ ತೆರಳಿದರು. ಈ ವೇಳೆ ಈಶ್ವರಪ್ಪ ಅವರು ವಿಜಯೇಂದ್ರ ಅವರಿಗೆ ಹಾರ ಹಾಕಿ ಸ್ವಾಗತ ಮಾಡಿದರು. ಬಳಿಕ ವಿಜಯೇಂದ್ರಗೆ ಸಿಹಿ ತಿನಿಸಿದರು. ಕೆಲ ಹೊತ್ತು ಪಕ್ಷದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: ಸಿಎಂಗೆ ಮತ್ತೊಂದು ಪತ್ರ ಬರೆದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್: ರಾಜೀನಾಮೆ ಎಚ್ಚರಿಕೆ