ಶಿವಮೊಗ್ಗ: ಜುಲೈ 17ರಿಂದ 22ರ ತನಕ ನಡೆಯುವ ವಾಯುಸೇನೆ ನೇಮಕಾತಿ ರ‍್ಯಾಲಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರ‍್ಯಾಲಿಗೆ ಬರುವ ಅಭ್ಯರ್ಥಿಗಳಿಗೆ ತಂಗಲು ಎರಡು ಕಡೆ ಸಮುದಾಯ ಭವನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ್ಯಾಲಿಗೆ ಪ್ರತಿ ದಿನ ಎರಡು ಸಾವಿರ ಅಭ್ಯರ್ಥಿಗಳು ಬರುವ ನಿರೀಕ್ಷೆ ಇದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಭ್ಯರ್ಥಿಗಳು ಬರುವ ನೀರಿಕ್ಷೆ ಇದ್ದು, ಅಭ್ಯರ್ಥಿಗಳಿಗೆ ತಂಗಲು ನಗರದ ಬಾಲರಾಜ್ ಅರಸ್ ರಸ್ತೆಯ ಒಕ್ಕಲಿಗರ ಸಮುದಾಯ ಭವನ ಹಾಗೂ ರೈಲ್ವೆ ನಿಲ್ದಾಣದ ಬಳಿಯ ಕೆ.ಇ.ಬಿ ಸಮುದಾಯ ಭವನವನ್ನು ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಜುಲೈ 17ರಿಂದ 22ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ವಾಯುಸೇನೆಗೆ ಆಯ್ಕೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಓಟದ ಸ್ಪರ್ಧೆ ನಡೆಸಲಾಗುತ್ತದೆ. ನಂತರ ಪರೀಕ್ಷೆಯು ಒಳಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಜುಲೈ 17 ಮತ್ತು 18ರಂದು ಇಂಡಿಯನ್ ಏರ್ ಫೋರ್ಸ್ ಪೊಲೀಸ್ ಮತ್ತು ಆಟೋ ಮೊಬೈಲ್ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೊರ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳು ರಸ್ತೆ ಬದಿ ಮಲಗದೆ, ಎರಡು ಸಮುದಾಯ ಭವನಗಳನ್ನು ಬಳಸಿಕೊಳ್ಳಬೇಕು. ನೆಹರು ಕ್ರೀಡಾಂಗಣದ ಸುತ್ತ ಅಭ್ಯರ್ಥಿಗಳಿಗೆ ಅನುಕೂಲಕರವಾಗಲು ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ನೇಮಕಾತಿಗೆ ಬರುವ ಅಭ್ಯರ್ಥಿಗಳಿಗೆ ಅನುಕೂಲವಾಗಲು ನೆಹರು ಕ್ರೀಡಾಂಗಣದಲ್ಲಿ ಜೆರಾಕ್ಸ್ ಹಾಗೂ ಫೋಟೋ ತೆಗೆಯುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಪಾವತಿ ಮಾಡಿ ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.