ಶಿವಮೊಗ್ಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ್ಗೆ ನೇಮಕಾತಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ಹಿನ್ನೆಲೆ ಮಲೆನಾಡಿನ ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಲಿ ಎಂಬ ಉದ್ದೇಶದಿಂದ ಮಾಜಿ ಯೋಧ ಕಿಶೋರ್ ಭೈರಾಪುರ ನೇತೃತ್ವದಲ್ಲಿ ಯುವಕರಿಗೆ ಉಚಿತವಾಗಿ ತರಬೇತಿ ಆರಂಭವಾಗಿದೆ.
ಮಲೆನಾಡಿನಿಂದ ಅಗ್ನಿಪಥ್ ನೇಮಕಾತಿಗೆ ಹೋಗುವ ಯಾವ ಯುವಕರೂ ನಿರಾಸೆಯಿಂದ ವಾಪಸ್ ಆಗಬಾರದು. ಹೀಗಾಗಿ, ಅವರಿಗೆ ಏನು ತರಬೇತಿ ಬೇಕೋ ಅದನ್ನು ನೀಡುವ ಮೂಲಕ ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ. ಅಗ್ನಿಪಥ್ ತರಬೇತಿ ಶಿವಮೊಗ್ಗದ ಎಲ್ಲಿ ನಡೆಯುತ್ತಿದೆ. ತರಬೇತಿ ಹೇಗೆ? ನಡೆಯುತ್ತಿದೆ ಎಂಬುದರ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಮಲೆನಾಡಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯವನ್ನು ಸೇರುವಂತಾಗಬೇಕು ಎಂಬ ಉದ್ದೇಶದಿಂದ ನಿವೃತ್ತ ಸೈನಿಕರೆಲ್ಲರೂ ಸೇರಿ ಈ ಹಿಂದೆ ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಆರಂಭಿಸಿದ್ದರು. ಈ ಸೈನಿಕರಿಗೆ ಮಲೆನಾಡಿನ ಪ್ರಮುಖ ಮಠವಾದ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಹಾಗೂ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಮ್ಮ ಮಠದ ಆವರಣದಲ್ಲಿಯೇ ಜಾಗವನ್ನೂ ನೀಡಿದ್ದರು.
ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್: ಅಂದಿನಿಂದ ನಿವೃತ್ತ ಸೈನಿಕರು ಯುವಕರಿಗೆ ಉಚಿತವಾಗಿ ಸೈನಿಕ ತರಬೇತಿ ನೀಡಲಾರಂಭಿಸಿದ್ದರು. ಪರಿಣಾಮ ಕಳೆದಬಾರಿ ನಡೆದ ಸೈನಿಕ ನೇಮಕಾತಿ ರ್‍ಯಾಲಿಯಲ್ಲಿ ಮಲೆನಾಡಿನ 35ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದೀಗ ಅಗ್ನಿಪಥ್ ನೇಮಕಾತಿ ಹಾವೇರಿಯಲ್ಲಿ ನಡೆಯುತ್ತಿದ್ದು, ಈ ನೇಮಕಾತಿಗೆ ಯುವಕರನ್ನು ಸನ್ನದ್ಧಗೊಳಿಸುವ ಕೆಲಸವನ್ನು ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಆರಂಭಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ್ ನೇಮಕಾತಿ ಶೀಘ್ರವೇ ಹಾವೇರಿಯಲ್ಲಿ ನಡೆಯಲಿದೆ ಎಂಬ ಮಾಹಿತಿ ಗೊತ್ತಾಗಿದೆ. ಅಂದಿನಿಂದ ಕೋಚಿಂಗ್ ಸೆಂಟರ್ ನಲ್ಲಿ ಉಚಿತ ತರಬೇತಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. 500ಕ್ಕೂ ಅಧಿಕ ಅಭ್ಯರ್ಥಿಗಳು ತರಬೇತಿಗೆ ಆಗಮಿಸಿದ್ದರು. ಸೇನಾ ನೇಮಕಾತಿ ಹೇಗೆ ನಡೆಯುತ್ತದೆಯೋ ಅದೇ ರೀತಿ ತರಬೇತಿ ಕೇಂದ್ರಕ್ಕೂ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
ಆರಂಭದಲ್ಲಿ ಅಭ್ಯರ್ಥಿಗಳ ಎತ್ತರವನ್ನು ಅಳತೆ ಮಾಡಿ ತರಬೇತಿಗೆ ಸೇರಿಸಿಕೊಂಡ ಬಳಿಕ ಅವರ ಎದೆಯ ಸುತ್ತಳತೆ ಪರೀಕ್ಷಿಸಲಾಗಿದೆ. ಇದಾದ ನಂತರ ರನ್ನಿಂಗ್ ರೇಸ್, ಪುಲ್ ಅಪ್ಸ್ ಸೇರಿದಂತೆ ಸೇನಾ ನೇಮಕಾತಿಯಲ್ಲಿ ಯಾವ ರೀತಿಯ ದೈಹಿಕ ಪರೀಕ್ಷೆ ನಡೆಯುತ್ತದೆಯೋ ಅದೇ ರೀತಿಯ ತರಬೇತಿಯನ್ನು ಇಲ್ಲಿ ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ. ಈ ಮೂಲಕ ಅಗ್ನಿಪಥ್ಗೆ ಮಲೆನಾಡಿನ ಅತಿ ಹೆಚ್ಚು ಯುವಕರು ಸೇರ್ಪಡೆಗೊಳ್ಳುವಂತೆ ಮಾಡುವ ಪಣವನ್ನು ಮಲೆನಾಡಿನ ನಿವೃತ್ತ ಸೈನಿಕರು ಮಾಡಲಾರಂಭಿಸಿದ್ದಾರೆ.
ಸೇನೆಗೆ ಯುವಕರು ಸೇರ್ಪಡೆ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮಲೆನಾಡು ಜಿಲ್ಲೆ ಶಿವಮೊಗ್ಗದಿಂದ ಸೇನೆಗೆ ಸೇರುವವರ ಸಂಖ್ಯೆ ಅತಿ ಕಡಿಮೆಯಿತ್ತು. ಮಾಹಿತಿ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದಿದ್ದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಉಚಿತವಾಗಿ ತರಬೇತಿ ಆರಂಭಿಸಿದ ನಂತರ ಮಲೆನಾಡಿನ ಹೆಚ್ಚಿನ ಯುವಕರು ಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದೀಗ ಅಗ್ನಿಪಥ್ಗೂ ಹೆಚ್ಚಿನ ಯುವಕರನ್ನು ಸೇರಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ತರಬೇತಿ ಆರಂಭಿಸಿರುವುದು ಶ್ಲಾಘನೀಯ.
ಓದಿ: ಮೊಟ್ಟೆ ಹೊಡೆಯುವುದು, ಟೊಮೆಟೋ ಎಸೆಯುವುದನ್ನು ನಾನು ಖಂಡಿಸುತ್ತೇನೆ: ಎಂಟಿಬಿ ನಾಗರಾಜ್