ಶಿವಮೊಗ್ಗ: ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೆಟ್‍ವರ್ಕ್ ಸಂಪರ್ಕವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್ಗಳನ್ನು ಮಂಜೂರು ಮಾಡಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ, ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ದೂರ ಸಂಪರ್ಕ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಮತ್ತು ಸುಧಾರಣಾ ದೃಷ್ಟಿಯಿಂದ ಕೇಂದ್ರದ ದೂರ ಸಂಪರ್ಕ ಸಚಿವರಾದ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತರಾದ 96 ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿತ್ತು. ಕೇಂದ್ರ ಸಚಿವರು ಈ ಮನವಿಗೆ ಕೂಡಲೇ ಸ್ಪಂದಿಸಿ ಹಲವಾರು ಕ್ರಮಗಳನ್ನು ಕೈಗೊಂಡು ಅಕ್ಟೋಬರ್ 27 ರಂದು ಪತ್ರ ಮುಖೇನ ವಿವರಗಳನ್ನು ನೀಡಿದ್ದಾರೆ.
ಕುಗ್ರಾಮಗಳಿಗೆ 4ಜಿ ಮೊಬೈಲ್ ಸರ್ವಿಸ್: ಆತ್ಮನಿರ್ಭರ ಭಾರತದ 4 ಜಿ ಟೆಕ್ನಾಲಜಿ ಯೋಜನೆಯಡಿ ದೇಶದಾದ್ಯಂತ ನೆಟ್‍ವರ್ಕ್ ಇಲ್ಲದ ಕುಗ್ರಾಮಗಳಿಗೆ ಅತ್ಯಾಧುನಿಕ ದೂರಸಂಪರ್ಕ ನೀಡಲು 26,136 ಕೋಟಿ ರೂ. ವೆಚ್ಚದ 4ಜಿ ಮೊಬೈಲ್ ಸರ್ವಿಸ್ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ದೇಶದ ಸುಮಾರು 24,680 ಕುಗ್ರಾಮಗಳಿಗೆ 4ಜಿ ಮೊಬೈಲ್ ಸರ್ವಿಸ್ ನೀಡಲಾಗುವುದು ಎಂದು ತಿಳಿಸಿದರು.
ಆತ್ಮನಿರ್ಭರ ಭಾರತ ಯೋಜನೆಯ ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್(ಯುಎಸ್‍ಒಎಫ್) ನಿಂದ ಬಿಎಸ್‍ಎನ್‍ಎಲ್ ಮೂಲಕ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ದೇಶದ ನಾಲ್ಕು ರಾಜ್ಯಗಳ ಒಂದೊಂದು ತಾಲೂಕುಗಳ ಗ್ರಾಮಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಕರ್ನಾಟಕದ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯ ಹಳ್ಳಿಗಳು, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
54 ಟವರ್ಗಳು ಮಂಜೂರು: ಮೊದಲ ಹಂತದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 54 ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್ಗಳನ್ನು ಮಂಜೂರು ಮಾಡಲಾಗಿದೆ. ಹೊಸನಗರ-24, ಸಾಗರ-12, ಶಿವಮೊಗ್ಗ-03, ತೀರ್ಥಹಳ್ಳಿ-11 ಮತ್ತು ಬೈಂದೂರು-04 ಒಟ್ಟು 54 ಟವರ್ಗಳನ್ನು ಮಂಜೂರು ಮಾಡಲಾಗಿದೆ.
ಇದನ್ನೂ ಓದಿ: ಬಿಜೆಪಿಯವರು __ಇಲ್ಲದವರು, ನಮ್ಮ ಮಕ್ಕಳನ್ನು ತೆಗೆದುಕೊಂಡು ಹೋಗ್ತಿದ್ದಾರೆ: ಸಿಎಂ ಇಬ್ರಾಹಿಂ ವ್ಯಂಗ್ಯ
ಇನ್ನುಳಿದ ಗ್ರಾಮಗಳನ್ನು ಅತೀ ಶೀಘ್ರದಲ್ಲಿ ಈ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಬ್ಯಾಟರಿ ಬ್ಯಾಕ್‍ಅಪ್ ಇಲ್ಲದೇ ಆಗಾಗ ದೂರ ಸಂಪರ್ಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅಡಚಣೆ ಕುರಿತು ಸಚಿವರ ಗಮನಕ್ಕೆ ತರಲಾಗಿತ್ತು. ಇದಕ್ಕಾಗಿ ಅವರು 22 ಬ್ಯಾಟರಿ ಸೆಟ್‍ಗಳ ಮಂಜೂರಾತಿ ನೀಡಿರುವುದಲ್ಲದೇ, ಇನ್ನುಳಿದಂತೆ ಇಡೀ ಜಿಲ್ಲೆಯಾದ್ಯಂತ ದೂರಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ 104 ಬ್ಯಾಟರಿ ಸೆಟ್‍ಗಳ ಮಂಜೂರಾತಿಗಾಗಿ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದರು.